ಕಲಬುರಗಿ: ‘ನಾಗೂರ ಬಳಿ ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಪ್ರಕರಣವನ್ನು ಭೇದಿಸಿದ್ದು, ಆರೋಪಿ ರಾಜಕುಮಾರನನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
‘ಗೌಂಡಿ ಕೆಲಸ ಮಾಡುತ್ತಿದ್ದ ರಾಜಕುಮಾರ ಜಗತ್ ನಿವಾಸಿ ಎಂದು ತಿಳಿದುಬಂದಿದೆ. ಕಮಲಾಪುರ ತಾಲ್ಲೂಕಿನ ನಾಗೂರ ಬಳಿ ಇತ್ತೀಚೆಗೆ ಮಹಿಳೆಯನ್ನು ಕೊಲೆ ಮಾಡಿ, ಬೆಂಕಿ ಹಚ್ಚಿ ಕಲ್ಲುಗಳಿಂದ ಮುಚ್ಚಿ ಹಾಕಲಾಗಿತ್ತು. ಆರಂಭದಲ್ಲಿ ಪೊಲೀಸರಿಗೂ ಮಹಿಳೆಯ ಮಾಹಿತಿ ಸಿಕ್ಕಿರಲಿಲ್ಲ. ತನಿಖೆಯ ನಂತರ ಬಸಮ್ಮ (60) ಕೊಲೆಯಾದವರು ಎಂದು ಪತ್ತೆ ಹಚ್ಚಲಾಗಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಬಸಮ್ಮ ಅವರು ಕಲಬುರಗಿ ನಗರದ ಸೂಪರ್ ಮಾರುಕಟ್ಟೆಯ ಮನೆಯಲ್ಲಿ ವಾಸಿಸುತ್ತಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ. ಆರಂಭದಲ್ಲಿ ಆರೋಪಿ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ತನಿಖಾ ತಂಡ ಆರೋಪಿಯನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ’ ಎಂದರು.
‘ಜುಲೈ 14ರಂದು ಮಹಿಳೆಯ ಕೊಲೆಯಾಗಿತ್ತು. ಆರಂಭದಲ್ಲಿ ಅಪರಿಚಿತ ಮಹಿಳೆ ಎಂದು ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಗ್ರಾಮೀಣ ಸಿಪಿಐ ವಿ.ನಾರಾಯಣ ಸೇರಿ ಇತರೆ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಶವ ಪರೀಕ್ಷೆ ನಂತರ ಕೊಲೆಯಾದ ಮಹಿಳೆ ಕಲಬುರಗಿ ನಗರದ ನಿವಾಸಿ ಎಂದು ತಿಳಿಯಿತು’ ಎಂದು ತಿಳಿಸಿದರು.
‘ಆರೋಪಿಯನ್ನು ಪತ್ತೆ ಹಚ್ಚುವುದೇ ಒಂದು ಸವಾಲಾಗಿತ್ತು. ಗಂಡ ನಿವೃತ್ತರಾಗಿ ಮೃತಪಟ್ಟಿದ್ದಾರೆ. ಮಹಿಳೆಗೆ ಪತಿಯ ನಿವೃತ್ತಿ ವೇತನವೂ ಬರುತ್ತಿತ್ತು. ಮಹಿಳೆಯ ಜತೆ ಸಂಪರ್ಕದಲ್ಲಿದ್ದವರ ಬಗ್ಗೆ ಮಾರುಕಟ್ಟೆಯ ಸುತ್ತಲಿನ ಅಂಗಡಿಯವರಿಗೆ ಕೇಳಿ, ಸಂಶಯ ಇದ್ದವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಆಗ ರಾಜಕುಮಾರನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ’ ಎಂದು ಎಸ್‌ಪಿ ವಿವರಿಸಿದರು.
ಕೊಲೆಗೆ ಕಾರಣವೇನು?
‘ಮಹಿಳೆಯಲ್ಲಿ ಬಂಗಾರ ಇರುವುದನ್ನು ತಿಳಿದುಕೊಂಡಿದ್ದ ಆರೋಪಿ ಅವರಿಂದ ಮೊದಲು 28 ಗ್ರಾಂ. ಬಂಗಾರ ಪಡೆದು ₹1 ಲಕ್ಷಕ್ಕೆ ಅಡವಿಟ್ಟು ಹಣ ತಂದುಕೊಂಡಿದ್ದಾನೆ. ಬಳಿಕ ಎರಡನೇ ಬಾರಿಗೂ ಇನ್ನೂ 20 ಗ್ರಾಂ. ಬಂಗಾರ ಪಡೆದುಕೊಂಡು ₹70 ಸಾವಿರ ತಂದುಕೊಂಡಿದ್ದಾನೆ. ಸ್ವಲ್ವ ಹಣ ಮಹಿಳೆಯ ಉಪಜೀವನಕ್ಕೆ ನೀಡಿದ್ದಾನೆ. ಕೆಲದಿನಗಳ ನಂತರ ಮಹಿಳೆ ಬಂಗಾರವನ್ನು ವಾಪಸ್ ಕೇಳಿದ್ದಾಳೆ. ಆದರೆ, ಈತ ಕೊಡುತ್ತೇನೆ ಎಂದು ಹೇಳಿ ಕೊಟ್ಟಿರಲಿಲ್ಲ. ಆಗ ಮಹಿಳೆ ಈತ ಬಂಗಾರ ತೆಗೆದುಕೊಂಡು ಕೊಡುತ್ತಿಲ್ಲ ಎಂದು ಜನರಿಗೆ ಹೇಳುತ್ತಿದ್ದಳು. ಜತೆಗೆ ಮೇಲಿಂದ ಮೇಲೆ ಕೇಳುತ್ತಿದ್ದರಿಂದ ಆರೋಪಿ ಮಹಿಳೆಗೆ ಊಟ ಕೊಡಿಸುತ್ತೇನೆ ಎಂದು ಬೈಕ್ ಮೇಲೆ ಕರೆದುಕೊಂಡು ಹೋಗಿ ನಾಗೂರ ಬಳಿ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿದ್ದಾನೆ. ನಂತರ ಪೆಟ್ರೋಲ್ ಹಾಕಿ ಸುಟ್ಟಿದ್ದಾನೆ. ಬಳಿಕ ರಸ್ತೆ ಬದಿ ಕಲ್ಲುಗಳಿಂದ ಮುಚ್ಚಿ ಹೋಗಿದ್ದಾನೆ’ ಎಂದು ಎಸ್‌ಪಿ ವಿವರಿಸಿದರು.
ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರನ್ನು ಎಸ್‌ಪಿ ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.