ಅಫಜಲಪುರ: ತಾಲ್ಲೂಕಿನ ಜೇವರ್ಗಿ(ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳು ಸಂಚಾರ ಮಾಡಲು ಯೋಗ್ಯ ರಸ್ತೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
‘ಶಾಲೆಗೆ ತೆರಳುವ ರಸ್ತೆ ತುಂಬಾ ಹಾಳಾಗಿದ್ದು, ಮಳೆ ಬಂದರೆ ಕಾಲ್ನಡಿಗೆ ಇಂದಲೂ ಸಹ ಸಂಚಾರ ಮಾಡಲು ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಶಾಲೆಗಳಿಗೆ ಕೇವಲ ಕೋಣೆಗಳು ನಿರ್ಮಾಣ ಮಾಡಿದರೆ ಸಾಲದು, ಶಾಲೆಗೆ ಮಕ್ಕಳು ಹೋಗಿ ಬರಲು ಸರಿಯಾದ ರಸ್ತೆ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.
‘ಶಾಲೆಗೆ ಹೋಗಲು ಮಕ್ಕಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಶಾಲೆ ಗ್ರಾಮದಿಂದ ದೂರ ಇರುವುದರಿಂದ ಮಕ್ಕಳು ಶಾಲಾ ಬ್ಯಾಗ್ ಹೊತ್ತು ಕಾಲ್ನಡಿಗೆ ಮೂಲಕ ಹಾಳಾದ ರಸ್ತೆಯಲ್ಲಿ ಸಂಚಾರ ಮಾಡುವುದು ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಮಕ್ಕಳಿಗೆ ಯೋಗ್ಯ ರಸ್ತೆ ನಿರ್ಮಿಸಿ ಕೊಡುವಂತೆ’ ಮನವಿ ಮಾಡಿದ್ದಾರೆ.
ಶಾಲೆಯ ಮುಖ್ಯಶಿಕ್ಷಕ ಅಣ್ಣಾರಾಯ ಪಾಟೀಲ್ ಮಾಹಿತಿ ನೀಡಿ, ‘ಅನೇಕ ಬಾರಿ ಗ್ರಾಮದಿಂದ ಶಾಲೆಗೆ ಸಂಚರಿಸುವ ರಸ್ತೆ ದುರಸ್ತಿಗೆ ಗ್ರಾ.ಪಂ ಪಿಡಿಒ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದೇನೆ. ಪ್ರತಿದಿನ ಮಕ್ಕಳು ನಡೆದುಕೊಂಡು ಶಾಲೆಗೆ ಬರುತ್ತಾರೆ. ಮಳೆ ಬಂದಾಗ ಮಕ್ಕಳಿಗೆ ಶಾಲೆಗೆ ಬರುವುದು ಸಾಕಷ್ಟು ತೊಂದರೆಯಾಗುತ್ತಿದೆ’ ಎಂದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಶರಣಬಸಪ್ಪ ಬಿರಾದಾರ ಮಾಹಿತಿ ನೀಡಿ, ‘ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಸಾಕಷ್ಟು ಅನುದಾನವಿದೆ, ಜನಪ್ರತಿನಿಧಿಗಳು ಗ್ರಾಮದಿಂದ ಶಾಲೆಗೆ ಸಂಚರಿಸುವ ರಸ್ತೆ ದುರಸ್ತಿಗೆ ಮುಂದಾಗಬೇಕು. ಗ್ರಾಮ ಪಂಚಾಯಿತಿ ನರೇಗಾ ಯೋಜನೆಯಡಿ ರಸ್ತೆ ದುರಸ್ತಿ ಮಾಡಲು ಅವಕಾಶವಿದೆ, ಈ ಕುರಿತು ತಾಲ್ಲೂಕು ಪಂಚಾಯಿತಿ ಇಒ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.