
ಅಫಜಲಪುರ: ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲೆಂದು ಸರ್ಕಾರ ಕಿರಿಯ ಆರೋಗ್ಯ ಸಹಾಯಕಿಯರ ಉಪ ಕೇಂದ್ರಗಳ ಆರಂಭಿಸಿದೆ. ಆದರೆ, ಆರೋಗ್ಯ ಸಹಾಯಕಿಯರು ಅಥವಾ ಸಮುದಾಯ ಆರೋಗ್ಯ ಅಧಿಕಾರಿಗಳು ಉಪ ಕೇಂದ್ರಗಳಿಗೆ ಬಾರದಿರುವುದರಿಂದ ಜನರು ಸಕಾಲದಲ್ಲಿ ಚಿಕಿತ್ಸೆ ಪಡೆಯಲು ಪರದಾಡುವಂತಾಗಿದೆ.
ಪ್ರತಿ ಉಪ ಕೇಂದ್ರಕ್ಕೆ ಒಬ್ಬರು ಕಿರಿಯ ಆರೋಗ್ಯ ಸಹಾಯಕರು ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ಇರುತ್ತಾರೆ. ಒಬ್ಬೊಬ್ಬರು ಮೂರು ಉಪ ಕೇಂದ್ರಗಳನ್ನು ನೋಡಿಕೊಳ್ಳಬೇಕು. ಉಪ ಕೇಂದ್ರದಲ್ಲಿ ಸಣ್ಣಪುಟ್ಟ ಕಾಯಿಲೆಗಳಿಗೆ ಮಾತ್ರೆಗಳನ್ನು ನೀಡಲಾಗುತ್ತದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಸಿಬ್ಬಂದಿ ಹೇಳುತ್ತಾರೆ.
ಇದು ಕೇವಲ ನೌಕರರಿಗೆ ಸಂಬಳ ಕೊಡುವ ಕೇಂದ್ರವಾಗಿದೆ. ಯಾವಾಗಲೂ ಮುಚ್ಚಿಕೊಂಡಿರುತ್ತದೆ. ಉಪ ಕೇಂದ್ರದಲ್ಲಿ ಒಬ್ಬ ಕಿರಿಯ ಆರೋಗ್ಯ ಸಹಾಯಕಿ ಮತ್ತು ಸಮುದಾಯ ಆರೋಗ್ಯದ ಅಧಿಕಾರಿ ಕೆಲಸ ಮಾಡಬೇಕು. ಸರ್ಕಾರ ಕಟ್ಟಡ ಸೇರಿ ಎಲ್ಲ ಸೌಲಭ್ಯ ನೀಡಿದೆ. ಅಗತ್ಯ ಸಿಬ್ಬಂದಿ ನೇಮಕ ಮಾಡಿದೆ. ಆದರೆ, ಅವರು ಮಾತ್ರ ಬರುತ್ತಿಲ್ಲ ಎನ್ನುತ್ತಾರೆ ಭೋಸಗಾ ಗ್ರಾಮಸ್ಥರು.
ತಾಲ್ಲೂಕಿನ ಅಳ್ಳಗಿ (ಕೆ) ಗ್ರಾಮದಲ್ಲಿ ಸರ್ಕಾರ ಕಿರಿಯ ಆರೋಗ್ಯ ಸಹಾಯಕಿಯರ ಉಪ ಕೇಂದ್ರ ನಿರ್ಮಿಸಲಾಗಿದೆ. ಆದರೆ ಅಲ್ಲಿಯೂ ಕಿರಿಯ ಆರೋಗ್ಯ ಸಹಾಯಕಿ ಹಾಗೂ ಸಮುದಾಯ ಆರೋಗ್ಯ ಅಧಿಕಾರಿ ಇರುವುದೇ ಇಲ್ಲ. ವರ್ಷಕ್ಕೊಮ್ಮೆ ಟೆಂಡರ್ ಪಡೆದವರು ಬಣ್ಣ ಬಳಿದು ಹೋಗುತ್ತಾರೆ. ಕಾಯಿಲೆಗಳು ಬಂದರೆ ಜನರು ಪಟ್ಟಣಕ್ಕೆ ಧಾವಿಸಬೇಕು. ತಾಲ್ಲೂಕು ಆರೋಗ್ಯಾಧಿಕಾರಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಹಣಮಂತ ಪೂಜಾರಿ.
ಪ್ರತಿಯೊಂದು ಗ್ರಾಮ ಪಂಚಾಯತಿಯಗಳಲ್ಲಿ ಕಿರಿಯ ಆರೋಗ್ಯ ಸಹಾಯಕಿಯರ ಉಪ ಕೇಂದ್ರ ಇದೆ. ಆದರೆ, ಹೆಚ್ಚಿನ ಕೇಂದ್ರಗಳಲ್ಲಿ ಸಿಬ್ಬಂದಿ ಬರುತ್ತಿಲ್ಲ. ಒಂದು ಬಾರಿ ಉಪಕೇಂದ್ರಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಭೇಟಿ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಶ್ರೀಕಾಂತ್ ದಿವಾಣಜಿ ಆಗ್ರಹಿಸಿದ್ದಾರೆ.
ಒಬ್ಬೊಬ್ಬರಿಗೆ ಎರಡೆರಡು ಕಡೆ ಕೆಲಸ:
ತಾಲ್ಲೂಕಿನಲ್ಲಿ 40 ಕಿರಿಯ ಆರೋಗ್ಯ ಸಹಾಯಕಿಯರ ಉಪ ಕೇಂದ್ರಗಳಿದ್ದು, 28 ಕಿರಿಯ ಆರೋಗ್ಯ ಸಹಾಯಕರು ಇರಬೇಕಾಗಿತ್ತು. 12 ಹುದ್ದೆಗಳು ಖಾಲಿ ಇವೆ. ಒಬ್ಬೊಬ್ಬರಿಗೆ ಎರಡೆರಡು ಕಡೆ ಕೆಲಸ ಮಾಡಲು ಸೂಚಿಸಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಕಚೇರಿಯ ಸಿಬ್ಬಂದಿ ಹನುಮಂತ್ರಾಯ ತಿಳಿಸಿದ್ದಾರೆ.
ಜನರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಉಪ ಕೇಂದ್ರದಲ್ಲಿ ದಿನಾಲು ಆರೋಗ್ಯ ಸಹಾಯಕಿಯರು ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು.ಶಬನಾಬೇಗಂ ಶೇಖ, ಗೌರ(ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಉಪ ಕೇಂದ್ರ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಲು ವೈದ್ಯರನ್ನು ಕಳುಹಿಸಿಕೊಡುವೆ. ಅಳ್ಳಗಿ(ಕೆ) ಗ್ರಾಮದ ಕಿರಿಯ ಆರೋಗ್ಯ ಸಹಾಯಕಿಯರ ಉಪ ಕೇಂದ್ರದ ಆರೋಗ್ಯ ಸಹಾಯಕಿಯರ ಗೈರು ಹಾಜರಿ ಕುರಿತು ವಿಚಾರ ಮಾಡಲಾಗುವುದುಚೇತನ ಕುಮಾರ, ತಾಲ್ಲೂಕು ವೈದ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.