
ಅಫಜಲಪುರ: ತಾಲ್ಲೂಕಿನ ಗೊಬ್ಬರವಾಡಿ ಗ್ರಾಮದಲ್ಲಿ ಶುಕ್ರವಾರ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು 8 ಎಕರೆ ಕಬ್ಬು ಸುಟ್ಟು ಕರಕಲಾಗಿದೆ.
ಕಬ್ಬಿನ ಹೊಲದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಒಂದಕ್ಕೊಂದು ತಾಗಿ ಶಾರ್ಟ್ ಸರ್ಕಿಟ್ ಸಂಭವಿಸಿದೆ. ಇದರಿಂದ ಗ್ರಾಮದ ಕಬ್ಬು ಬೆಳೆಗಾರರಾದ ಮದರ್ ಗುಡುಸಾಬ್ ಕುಮಸಗಿ ಹಾಗೂ ಅನಸರಮಾ ಗುಡುಸಾಬ್ ಕುಮಸಿಗಿ ಅವರಿಗೆ ಸೇರಿದ ತಲಾ 4 ಎಕರೆ ಕಬ್ಬು ಸುಟ್ಟು ಕರಕಲಾಗಿದೆ.
ಸುಮಾರು 10 ತಿಂಗಳು ಕಬ್ಬು ನಾಟಿ ಮಾಡಿ, ನಿರ್ವಹಣೆ ಮಾಡಿದ್ದೇನೆ. ಕಬ್ಬು ನಿರ್ವಹಣೆಗಾಗಿ ಸಾಲ ಮಾಡಿದ್ದೇನೆ. ಕಬ್ಬು ಕಟಾವು ಮಾಡಿ ಸಾಲು ತೀರಿಸಬೇಕು ಎಂದುಕೊಂಡಿದ್ದೆ. ಆದರೆ ಕಬ್ಬು ಸಂಪೂರ್ಣ ನಾಶವಾಗಿದೆ ಎಂದು ಕಬ್ಬು ಬೆಳೆಗಾರ ಅಲವತ್ತುಕೊಂಡರು.
ಎರಡು ದಿನಗಳಲ್ಲಿ ಕಬ್ಬು ಕಟಾವಿಗೆ ಸಿದ್ಧತೆ ಮಾಡಿದ್ದೆವು. ಆದರೆ ಕಬ್ಬು ಸುಟ್ಟು ಹೋಗಿದ್ದು, ರೈತರಿಗೆ ಹಾನಿಯಾಗಿದೆ. ಸುಟ್ಟ ಕಬ್ಬು ತಕ್ಷಣ ಕಟಾವುಗೊಳಿಸಿ, ಸಕ್ಕರೆ ಕಾರ್ಖಾನೆಯವರು ಸಾಗಾಣಿಕೆ ಮಾಡಿಕೊಳ್ಳಬೇಕು. ಹೊಲದ ಮಧ್ಯದಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬ ತೆರವುಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.