ಅಫಜಲಪುರ: ತಾಲ್ಲೂಕು ಪ್ರಾಂತ ರೈತ ಸಂಘದ ಮುಖಂಡರು ಹಾಗೂ ರೈತರು ಜಂಟಿಯಾಗಿ ಗುರುವಾರ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ಖಾಸಗಿ ಅಗ್ರೋ ಕೇಂದ್ರದವರು ಮನಸ್ಸಿಗೆ ಬಂದಂತೆ ಹತ್ತಿ ಬೀಜ ಮತ್ತು ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಅವರು ನೀಡುವ ರಿಶೀದಿಗಳ ಮೇಲೆ ಹೆಸರು ಇರುವುದಿಲ್ಲ. ಕೇವಲ ಬೆಲೆ ಮಾತ್ರ ಬರೆದಿರುತ್ತಾರೆ ಎಂದು ರೈತ ಮುಖಂಡರು, ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್.ಗಡಿಗಿಮನಿಯ ಅವರಿಗೆ ರಶೀದಿಗಳನ್ನು ತೋರಿಸಿ, ತಾವು ಆಗ್ರೋಗಳಿಗೆ ಭೇಟಿ, ಪರಿಶೀಲನೆ ನಡೆಸಬೇಕು. ಇಲ್ಲದಿದ್ದರೆ ನಾವು ಹಂತ ಹಂತವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಶ್ರೀಮಂತ ಬಿರಾದಾರ ಹಾಗೂ ಕಾರ್ಯದರ್ಶಿ, ಗುರು ಚಾಂದಕೋಟೆ ಮಾತನಾಡಿ, ‘ರೈತರು ಆಗ್ರೋ ಕೇಂದ್ರಗಳಿಗೆ ಗೊಬ್ಬರ ಬೀಜ ಖರೀದಿಸುವ ವೇಳೆ ಹತ್ತಿ ಬಿತ್ತನೆ ಬೀಜಕ್ಕೆ ₹ 300 ಹೆಚ್ಚಿಗೆ ತೆಗೆದುಕೊಂಡಿದ್ದಾರೆ. ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೆಲೆ ತೆಗೆದುಕೊಳ್ಳುತ್ತಿದ್ದಾರೆ. ಅವರು ನೀಡುತ್ತಿರುವ ರಶೀದಿಗಳು ನಕಲಿಯಾಗಿವೆ. ಹೀಗಾಗಿ ನಮಗೆ ತೊಂದರೆ ಆಗುತ್ತದೆ. ಇದರ ಬಗ್ಗೆ ಕೃಷಿ ಇಲಾಖೆಯವರು ಕ್ರಮ ಜರುಗಿಸಬೇಕು. ದುಬಾರಿ ಬೆಲೆಗೆ ಗೊಬ್ಬರ ಮತ್ತು ಹತ್ತಿ ಬೀಜ ಮಾರಾಟ ಮಾಡುವವರ ಪರವಾನಗಿ ರದ್ದುಗೊಳಿಸಬೇಕು. ವ್ಯವಸ್ಥೆ ಸರಿಪಡಿಸಲು ನಿಮಗೆ ಒಂದು ವಾರ ಸಮಯ ಕೊಡುತ್ತೇವೆ. ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ನಾವು ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮೇಲೆ ಕುಳಿತು ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಗಂಟೆಯಲ್ಲಿ ಅಧಿಕಾರಿಗಳ ಭೇಟಿ: ಪ್ರಾಂತ ರೈತ ಸಂಘದವರು ಖಾಸಗಿ ಅಗ್ರೋ ಕೇಂದ್ರಗಳು ಮಾಡುತ್ತಿರುವ ಮೋಸಗಳ ಬಗ್ಗೆ ಮನವಿ ಮಾಡಿಕೊಂಡ ಒಂದು ಗಂಟೆಯೊಳಗೆ ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್.ಗಡಗಿಮನಿ ಹಾಗೂ ಕೃಷಿ ಅಧಿಕಾರಿಗಳಾದ ಆನಂದ ಅವರಾದ, ಶೈಪೆನ್ಸಾಬ್ ಮುಲ್ಲಾ ಅವರ ತಂಡ ಪಟ್ಟಣದ ಬಸವ, ಕಾಮಧೇನು, ಮಹಾಂತೇಶ್ ಹಾಗೂ ಗೊಲ್ಲಾಳೇಶ್ವರ, ಬಸವ, ಖಂಡೋಬಾ ಸೇರಿದಂತೆ ವಿವಿಧ ಖಾಸಗಿ ಅಗ್ರೋ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿರುವ ರಶೀದಿಗಳನ್ನು, ಗೊಬ್ಬರ ಬೀಜ ಸಂಗ್ರಹ ಮತ್ತು ರೇಟ್ ಬೋರ್ಡ್‌ಗಳನ್ನು ಪರಿಶೀಲನೆ ಮಾಡಿ, ಅವರಿಗೆ ಬೀಜವಾಗಲಿ, ಗೊಬ್ಬರವಾಗಲಿ ಸರ್ಕಾರ ನಿಗದಿಪಡಿಸಿದ ಬೆಲೆಗೆ ಮಾತ್ರ ಮಾರಾಟ ಮಾಡಬೇಕು. ಒಂದು ವೇಳೆ ಆಗ್ರೋ ಕೇಂದ್ರದವರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಮತ್ತು ರೈತರು ದೂರು ನೀಡಿದರೆ ತಮ್ಮ ಮೇಲೆ ಮುಲಾಜು ಇಲ್ಲದೆ ಕ್ರಮ ಕೈಗೊಳ್ಳಲಾಗುವುದು. ಅಗ್ರೋ ಕೇಂದ್ರದ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಆಗ್ರೋ ಕೇಂದ್ರಗಳ ಮಾಲೀಕರಿಗೆ ತಾಕೀತು ಮಾಡಿದರು.
ರೈತ ಮುಖಂಡರಾದ ರಾಜುಗೌಡ ಪಾಟೀಲ, ಯಶವಂತ್ ಪಟ್ಟದಾರ, ಭೀಮನಗೌಡ ನಾರಸೇರ ,ಅಭಿಷೇಕ್ ಕುಲಕರ್ಣಿ, ನಿಂಗಬಸಪ್ಪ ಅವರಲ್ಲಿ, ಸಿದ್ದು ,ಶಾಂತಮಲ್ಲಪ್ಪ ಹೊನ್ನುಂಗುರ , ಬಸವರಾಜ ಪಾಟೀಲ್, ರಾಕೇಶ್ ಪಾಟೀಲ್ ,ಬಾಬುಗೌಡ ಮಾಲಿಪಾಟೀಲ್, ಪಾಂಡು ಕುಲಕರ್ಣಿ,ಎಲ್ಲಪ್ಪ ನೆಲೋಗಿ, ಶರಣು ಕೌಲಗಿ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.