ADVERTISEMENT

ವಾಡಿ: ವಿದ್ಯಾರ್ಥಿಗಳಿಂದ ರಸ್ತೆ ತಡೆ

ವಿದ್ಯಾರ್ಥಿ ವೇತನ ಸ್ಥಗಿತ ನಿರ್ಧಾರಕ್ಕೆ ಎಐಡಿಎಸ್‌ಓ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 10:34 IST
Last Updated 8 ನವೆಂಬರ್ 2019, 10:34 IST
ವಾಡಿ ಪಟ್ಟಣದ ಮೌಲಾನಾ ಅಬ್ದುಲ್ ಕಲಾಂ ವೃತ್ತದಲ್ಲಿ ಎಐಡಿಎಸ್ಓ ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿದರು
ವಾಡಿ ಪಟ್ಟಣದ ಮೌಲಾನಾ ಅಬ್ದುಲ್ ಕಲಾಂ ವೃತ್ತದಲ್ಲಿ ಎಐಡಿಎಸ್ಓ ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿದರು   

ವಾಡಿ: 2019–20ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಪದ್ಧತಿಯನ್ನು ರದ್ದು ಮಾಡಿರುವ ರಾಜ್ಯ ಸರ್ಕಾರದ ನಡೆಗೆ ಸ್ಥಳೀಯ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಜೇಷನ್ (ಎಐಡಿಎಸ್ಓ) ನೇತೃತ್ವದಲ್ಲಿ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಗುರುವಾರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಮೌಲಾನಾ ಅಬ್ದುಲ್‌ ಕಲಾಂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅರ್ಧ ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಸಂಘಟನೆಯ ಸ್ಥಳೀಯ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ಮಾತನಾಡಿ, 'ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು ಈ ವರ್ಷದಿಂದ ಅನುದಾನದ ಕೊರತೆ ಹೆಸರಿನಲ್ಲಿ ಕಡಿತ ಮಾಡುತ್ತಿರುವುದು ಸಂಪೂರ್ಣವಾಗಿ ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ.ಶಿಕ್ಷಣ ಕ್ಷೇತ್ರದಲ್ಲಿ ಅನುದಾನದಕೊರತೆ ಇದ್ದರೆ ಜನಪರ ಸರ್ಕಾರಗಳು ಅದನ್ನು ಹೆಚ್ಚಿಸಬೇಕೇ ವಿನಃ ರದ್ದು ಮಾಡುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

ADVERTISEMENT

‘ರಾಜ್ಯ ಸರ್ಕಾರ ಈ ಆದೇಶವನ್ನು ಕೂಡಲೇ ಹಿಂಪಡೆಯ ದಿದ್ದರೆ ರಾಜ್ಯಾದ್ಯಂತ ವಿದ್ಯಾರ್ಥಿಗಳನ್ನು ಸಂಘಟಿಸಿ ಹೋರಾಟ ಮಾಡಲಾ ಗುವುದು’ ಎಂದು ಎಚ್ಚರಿಸಿದರು.

ಎಐಡಿವೈಓ ಸಂಘಟನೆಯ ಮುಖಂಡ ಮಲ್ಲಿನಾಥ ಹುಂಡೆಕಲ್ ಮಾತನಾಡಿ, 'ಸರ್ಕಾರದ ಈ ನಡೆಯಿಂದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಭಾರೀ ಪೆಟ್ಟು ಬೀಳಲಿದೆ. ಇದರಿಂದ ಲಕ್ಷಾಂತರ ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳಲು ಪರದಾಡಬೇಕಾದ ಪರಿಸ್ಥಿತಿ ಉಂಟಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಆರ್‌ಕೆಎಸ್ ರೈತ ಸಂಘಟನೆಯ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ ಅಲ್ಲಿಪೂರ, ಎಐಡಿಎಸ್ಓ ಸಂಘಟನೆಯ ಸ್ಥಳೀಯ ಅಧ್ಯಕ್ಷ ಗೌತಮ ಪರ್ತೂರಕರ, ಸದಸ್ಯರಾದ ಅರುಣ ಹಿರೆಬಾನೂರು, ನಾಗರಾಜ ಸೂಲಹಳ್ಳಿ, ಭೀಮು ಆಂದೋಲ, ದತ್ತು ಹುಡೇಕರ, ಶಿವುಕುಮಾರ ಆಂದೋಲ, ಖದೀರ ಡೋಣಗಾಂವ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.