ADVERTISEMENT

ಕಲಬುರಗಿ | ಬೆಳೆ ಹಾನಿ: ತುರ್ತು ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 6:49 IST
Last Updated 16 ಸೆಪ್ಟೆಂಬರ್ 2025, 6:49 IST
ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ರೈತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ರೈತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಕಲಬುರಗಿ: ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಅತಿವೃಷ್ಟಿಯಾಗಿ ನೆಲಕಚ್ಚಿರುವ ಬೆಳೆಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ಹಾಗೂ ಭಾರತ ಖೇತ್ ಮಜ್ದೂರ್ ಯೂನಿಯನ್ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ರೈತರು ಪ್ರತಿಭಟನೆ ನಡೆಸಿದರು.

ನಿರಂತರವಾಗಿ ಸುರಿದ ಮಳೆಯಿಂದಾಗಿ ಉದ್ದು, ಹೆಸರು, ಸೋಯಾಬೀನ್, ತೊಗರಿ, ಹತ್ತಿ ಇನ್ನಿತರೆ ಬೆಳೆಗಳು ಹಾಳಾಗಿ ಹೋಗಿವೆ. ತೋಟಗಾರಿಕೆ ಬೆಳೆಗಳಾದ ಟೊಮೆಟೊ, ಉಳ್ಳಾಗಡ್ಡಿ, ಬದನೆಕಾಯಿ, ಬಾಳೆ, ತರಕಾರಿಗಳೂ ನೆಲಕಚ್ಚಿದ್ದು ರೈತರ ಬಾಳು ಯಾತನಾದಾಯಕವಾಗಿದೆ. ಲಕ್ಷಾಂತರ ರೈತರು ವಿಮೆ ಕಂತು ಪಾವತಿ ಮಾಡಿದ್ದು, ಅವರಿಗೆ ಶೀಘ್ರವೇ ಬೆಳೆ ವಿಮೆ ಪರಿಹಾರವನ್ನು ಸರ್ಕಾರ ಮಂಜೂರು ಮಾಡಿಸಬೇಕು. ಗ್ರಾಮ ಹಾಗೂ ಹೋಬಳಿ ಮಟ್ಟದಲ್ಲಿ ಬೆಳೆ ಹಾನಿ ಸಮೀಕ್ಷೆ ಸಮರ್ಪಕವಾಗಿ ನಡೆಯುತ್ತಿಲ್ಲ. ಹಾಳಾಗಿರುವ ಬೆಳೆಗಳಿಗೆ ಸರ್ಕಾರ ತುರ್ತು ಪರಿಹಾರವಾಗಿ ಪ್ರತಿ ಎಕರೆಗೆ ₹ 25 ಸಾವಿರ ನೀಡಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಬರಗಾಲ ಮುಕ್ತ ಯೋಜನೆ ರೂಪಿಸಬೇಕು. ಪ್ರತಿ ಟನ್ ಕಬ್ಬಿಗೆ ₹ 5 ಸಾವಿರ ಬೆಂಬಲ ಬೆಲೆ ನಿಗದಿ ಮಾಡಬೇಕು. ಅದರ ಉಪ ಉತ್ಪನ್ನಗಳ ಮಾರಾಟದಲ್ಲಿ ರೈತರಿಗೆ ಅರ್ಧ ಪಾಲು ಕೊಡಬೇಕು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು. ಬೆಂಬಲ ಬೆಲೆ ಸಿಗದ ಕಾರಣ ರೈತರು ಕಡಿಮೆ ದರಕ್ಕೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಬ್ಯಾಂಕುಗಳಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಖಾಸಗಿ ಫೈನಾನ್ಸ್‌ನವರು ರೈತರಿಗೆ ಕಿರುಕುಳ ನೀಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ADVERTISEMENT

ಕಿಸಾನ್ ಸಭಾ ಜಿಲ್ಲಾ ಘಟಕದ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ, ಜಿಲ್ಲಾ ಅಧ್ಯಕ್ಷ ಭೀಮಾಶಂಕರ ಮಾಡಿಯಾಳ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ, ಕಿಸಾನ್ ಸಭಾ ಜಿಲ್ಲಾ ಕಾರ್ಯದರ್ಶಿ ಮಹ್ಮದ್ ಚೌಧರಿ, ಮುಖಂಡರಾದ ಮಲ್ಲಿಕಾರ್ಜುನ ಕೆಲ್ಲೂರ, ಶರಣಬಸಪ್ಪ ಗಣಜಲಖೇಡ, ಸಾಜಿದ್ ಅಹ್ಮದ್ ದಿಗ್ಗಾಂವಕರ್, ಭೀಮರಾಯ ಮುದಬಸಪ್ಪಗೋಳ, ಮಹಾದೇವ ಪೂಜಾರಿ, ಸಿದ್ದಣ್ಣ ಕಣ್ಣೂರ, ಫಾತಿಮಾ ಶೇಖ್, ಜನಾಬಾಯಿ ವಗ್ಗೆ, ಕಲ್ಯಾಣಿ ಅವಟೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.