ADVERTISEMENT

ನಾಳೆ ಕಲಬುರ್ಗಿ ವಿಮಾನ ನಿಲ್ದಾಣ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 12:13 IST
Last Updated 21 ನವೆಂಬರ್ 2019, 12:13 IST
ಇದೇ 22ರಂದು ಕಲಬುರ್ಗಿ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿರುವ ಪ್ರಯುಕ್ತ ನಿಲ್ದಾಣದ ಮುಂಭಾಗದಲ್ಲಿ ಕಾರ್ಮಿಕರೊಬ್ಬರು ಗುರುವಾರ ಪೂರ್ವಸಿದ್ಧತಾ ಕಾರ್ಯದಲ್ಲಿ ತೊಡಗಿದ್ದ ನೋಟ
ಇದೇ 22ರಂದು ಕಲಬುರ್ಗಿ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿರುವ ಪ್ರಯುಕ್ತ ನಿಲ್ದಾಣದ ಮುಂಭಾಗದಲ್ಲಿ ಕಾರ್ಮಿಕರೊಬ್ಬರು ಗುರುವಾರ ಪೂರ್ವಸಿದ್ಧತಾ ಕಾರ್ಯದಲ್ಲಿ ತೊಡಗಿದ್ದ ನೋಟ   

ಕಲಬುರ್ಗಿ: ಕಲ್ಯಾಣ ಕರ್ನಾಟಕ ಭಾಗದ ಜನತೆ,ಜನಪ್ರತಿನಿಧಿಗಳು ಹಾಗೂ ಉದ್ಯಮಿಗಳ ಬಹುನಿರೀಕ್ಷಿತ ಕಲಬುರ್ಗಿ ವಿಮಾನ ನಿಲ್ದಾಣವನ್ನು ಇದೇ 22ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.

ಮಧ್ಯಾಹ್ನ 1.25ಕ್ಕೆ ಸ್ಟಾರ್‌ ಏರ್‌ ವಿಮಾನದ ಮೂಲಕ ಬೆಂಗಳೂರಿನಿಂದ ಕಲಬುರ್ಗಿಗೆ ಬಂದಿಳಿಯುವ ಮುಖ್ಯಮಂತ್ರಿ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಬಳಿಕ 1.55ಕ್ಕೆ ಅದೇ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರ ಜನ ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡು ಗ್ರಾಮಸ್ಥರು ಭಾಗವಹಿಸಲಿದ್ದಾರೆ.

ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅಧ್ಯಕ್ಷ ಅರವಿಂದ ಸಿಂಗ್‌, ಕೇಂದ್ರ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ ಸಿಂಗ್‌ ಖರೋಲಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ADVERTISEMENT

ನ 25ರಿಂದ ಮತ್ತೊಂದು ವಿಮಾನ: ‘ಸ್ಟಾರ್‌ ಏರ್‌ ಸಂಸ್ಥೆಯು 22ರಂದು ಮೊದಲ ವಾಣಿಜ್ಯ ವಿಮಾನ ಹಾರಾಟವನ್ನು ನಡೆಸಲಿದ್ದು, ಆರಂಭಿಕ ಹಂತದಲ್ಲಿ ವಾರದಲ್ಲಿ ಮೂರು ದಿನ ಕಲಬುರ್ಗಿ–ಬೆಂಗಳೂರು ಮಧ್ಯೆ ಸಂಚಾರ ನಡೆಸಲಿದೆ. ಇದೇ 25ರಂದು ಅಲಯನ್ಸ್‌ ಏರ್‌ ಸಂಸ್ಥೆಯೂ ತನ್ನ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಪ್ರಕಟಿಸಿದೆ. ಹೀಗಾಗಿ, ಈ ಭಾಗದ ಜನರು ಶೀಘ್ರವೇ ರಾಜ್ಯದ ರಾಜಧಾನಿ ತಲುಪಬಹುದಾಗಿದೆ. ಮುಂದಿನ ದಿನಗಳಲ್ಲಿ ತಿರುಪತಿ, ದೆಹಲಿ ಬಳಿಯ ಹಿಂಡನ್‌ಗೂ ಸಂಚಾರ ಆರಂಭಗೊಳ್ಳಲಿದೆ. ಮುಂದಿನ ವರ್ಷ ಹಜ್‌ ಯಾತ್ರಿಕರಿಗೆ ಅನುಕೂಲವಾಗುವಂತೆ ಕಲಬುರ್ಗಿಯಿಂದಲೇ ವಿಮಾನ ಸಂಚಾರ ನಡೆಸಲು ಪ್ರಯತ್ನಿಸಲಾಗುವುದು’ ಎಂದು ಸಂಸದ ಡಾ.ಉಮೇಶ್‌ ಜಾಧವ್‌ ವಿಮಾನ ನಿಲ್ದಾಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.