
ಕಲಬುರಗಿ: ‘ಕೇಂದ್ರ ಸರ್ಕಾರವು ವಿಬಿ– ಜಿ ರಾಮ್ ಜಿ ಕಾಯ್ದೆ ಜಾರಿ ಮೂಲಕ ಗ್ರಾಮೀಣ ಜನರ ಬದುಕಿಗೆ ಘೋರ ಹೊಡೆತ ನೀಡಿದೆ’ ಎಂದು ಕೆಪಿಸಿಸಿ ವಕ್ತಾರೆ ಆಯಿಷಾ ಫರ್ಝಾನ್ ಟೀಕಿಸಿದರು.
‘ರಾಜ್ಯಗಳೊಂದಿಗೆ ಸಮಾಲೋಚಿಸದೇ, ಸಂಸತ್ತಿನಲ್ಲಿ ಸಮರ್ಪಕವಾಗಿ ಚರ್ಚಿಸದೇ ಜಾರಿಗೊಳಿಸಿದ ಈ ಕಾಯ್ದೆಯು ಒಕ್ಕೂಟದ ವ್ಯವಸ್ಥೆ ಪಾವಿತ್ರ್ಯದ ಮೇಲಿನ ದಾಳಿಯಾಗಿದೆ’ ಎಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
‘ನರೇಗಾದಲ್ಲಿ 100 ದಿನ ಉದ್ಯೋಗ ನೀಡಲಾಗುತ್ತಿತ್ತು. ಹೊಸ ಕಾಯ್ದೆಯಲ್ಲಿ 125 ದಿನಗಳ ಕೆಲಸ ನೀಡುತ್ತಿರುವುದಾಗಿ ಬಿಜೆಪಿ ಹೇಳುತ್ತಿದೆ. ಈ ಸರ್ಕಾರಕ್ಕೆ 100 ದಿನಗಳ ಪೂರ್ಣ ಉದ್ಯೋಗವನ್ನು ಬರೀ ಶೇ 2ರಷ್ಟು ಮಂದಿಗೆ ಮಾತ್ರವೇ ನೀಡಲು ಸಾಧ್ಯವಾಗಿದೆ. ಅಂಥದರಲ್ಲಿ 125 ದಿನಗಳ ಕೆಲಸ ನೀಡುತ್ತೇವೆ ಎಂಬುದರಲ್ಲಿ ಅರ್ಥವಿದೆಯೇ’ ಎಂದು ಪ್ರಶ್ನಿಸಿದರು.
‘ನರೇಗಾದಲ್ಲಿ ಉದ್ಯೋಗ ಕೇಳುವುದು ಕಾನೂನುಬದ್ಧ ಹಕ್ಕಾಗಿತ್ತು. 15 ದಿನಗಳಲ್ಲಿ ಉದ್ಯೋಗ ಕೊಡದಿದ್ದರೆ, ನಿರುದ್ಯೋಗ ಭತ್ಯೆ ನೀಡಬೇಕಿತ್ತು. ಹೊಸ ಕಾಯ್ದೆಯಲ್ಲಿ ಸಂಪೂರ್ಣವಾಗಿ ಕೇಂದ್ರದ ಸರ್ಕಾರವೇ ನಿಯಂತ್ರಣ ಹೊಂದಿದೆ. ಇಲ್ಲಿ ಜನರು ಭಿಕ್ಷೆಯಂತೆ ಕೆಲಸ ಕೇಳುವ ಸನ್ನಿವೇಶ ಸೃಷ್ಟಿಸಲಾಗಿದೆ. ಜೊತೆಗೆ ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ ಕನಸಿಗೂ ಕೊಳ್ಳಿ ಇಟ್ಟಿದೆ’ ಎಂದು ದೂರಿದರು.
‘2024–25ರಲ್ಲಿ ಶೇ 8ರಷ್ಟಿದ್ದ ಸೆಸ್ ಅನ್ನು ಕ್ರಮೇಣವಾಗಿ ಶೇ 28ಕ್ಕೆ ಹೆಚ್ಚಿಸಿದೆ. ಅದರಿಂದ ಹೊರತಾದ ಮೊತ್ತವಷ್ಟೇ ರಾಜ್ಯಗಳಿಗೆ ಹಂಚುತ್ತಿದೆ. ಒಂದೆಡೆ ರಾಜ್ಯಗಳಿಗೆ ನೀಡುತ್ತಿರುವ ತೆರಿಗೆ ಪಾಲು ತಗ್ಗಿಸುತ್ತಿರುವ ಕೇಂದ್ರ ಸರ್ಕಾರವು ಹೊಣೆಗಾರಿಕೆಯನ್ನು ಮಾತ್ರ ಹೆಚ್ಚಿಸುತ್ತಲೇ ಸಾಗಿದೆ’ ಎಂದು ಆರೋಪಿಸಿದರು.
‘ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರೂ ಆಗಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಕಾಂಗ್ರೆಸ್ ಕಾರ್ಮಿಕರ ವಿಭಾಗದ ಜಿಲ್ಲಾ ಉಪಾಧ್ಯಕ್ಷೆ ಶೈನಾಜ್ ಇದ್ದರು.
‘ಮನರೇಗಾ ಮರುಜಾರಿಗೆ ಹೋರಾಟ’
'ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮರು ಜಾರಿಗೆ ಆಗ್ರಹಿಸಿ ಕಾಂಗ್ರೆಸ್‌ನಿಂದ ಹೋರಾಟ ನಡೆಸಲಾಗುವುದು. ಜನವರಿಯಲ್ಲಿ ಸಾಂಕೇತಿಕ ಉಪವಾಸ ಸತ್ಯಾಗ್ರಹ ಸೇರಿದಂತೆ ಹಲವರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜನವರಿ 27ರಿಂದ ಫೆಬ್ರುವರಿ 7ರವರೆಗೆ ಎಲ್ಲ ಬ್ಲಾಕ್ ಕಾಂಗ್ರೆಸ್ ಸಮಿತಿಗಳು ತಾಲ್ಲೂಕು ಮಟ್ಟದಲ್ಲಿ 10ರಿಂದ 15 ಕಿ.ಮೀ ಪಾದಯಾತ್ರೆ ನಡೆಸಿವೆ. ಬಳಿಕ ಜನವರಿ 31ರಿಂದ ಫೆಬ್ರುವರಿ 6ರ ತನಕ ಮಹಾತ್ಮ ಗಾಂಧಿ ನರೇಗಾ ಬಚಾವೋ ಜಿಲ್ಲಾಮಟ್ಟದ ಧರಣಿಯನ್ನು ಎಲ್ಲ ಜಿಲ್ಲಾಧಿಕಾರಿ ಕಚೇರಿಗಳ ಎದುರು ನಡೆಸಲಾಗುವುದು’ ಎಂದು ಆಯಿಷಾ ಫರ್ಜಾನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.