ADVERTISEMENT

ಆಳಂದ | ಕುಡಿಯುವ ನೀರಿನ ಸಮಸ್ಯೆ ಉಲ್ಬಣ

ಆಳಂದ ತಾಲ್ಲೂಕಿನ 19 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ಸಂಜಯ್ ಪಾಟೀಲ
Published 7 ಮೇ 2025, 5:28 IST
Last Updated 7 ಮೇ 2025, 5:28 IST
ಆಳಂದ ತಾಲ್ಲೂಕಿನ ಝಳಕಿ (ಕೆ) ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಬಾವಿ ಬಳಿ ನಿಂತ ಯುವಕರು
ಆಳಂದ ತಾಲ್ಲೂಕಿನ ಝಳಕಿ (ಕೆ) ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಬಾವಿ ಬಳಿ ನಿಂತ ಯುವಕರು   

ಆಳಂದ: ತಾಲ್ಲೂಕಿನ ವಿವಿಧ ಗ್ರಾಮದಲ್ಲಿ ಮೇ ತಿಂಗಳ ಆರಂಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. 19 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಮೂಲಗಳು ಬತ್ತಿವೆ.

ತಾಲ್ಲೂಕಿನ ಝಳಕಿ (ಕೆ), ಜೀರಹಳ್ಳಿ, ಜೀರಹಳ್ಳಿ ತಾಂಡಾ, ಸರಸಂಬಾ, ಯಳಸಂಗಿ, ನಿರಗುಡಿ, ಅಂಬೇವಾಡ, ತಡಕಲ, ಹೊದಲೂರು, ಅಲ್ಲಾಪುರ, ಕಣಮಸ, ಕಡಗಂಚಿ, ಧುತ್ತರಗಾಂವ, ಮದಗುಣಕಿ, ಜವಳಗಾ ಬಿ, ಕಾಮನಹಳ್ಳಿ, ಧಂಗಾಪುರ, ಹೆಬಳಿ ತಾಂಡಾ, ಸಾವಲೇಶ್ವರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ.

‘ಬೇಸಿಗೆಯ ಬಿಸಿಲು ಹೆಚ್ಚಿದಂತೆ ಕುಡಿಯುವ ನೀರಿನ ಸಮಸ್ಯೆಯೂ ವ್ಯಾಪಕವಾಗುತ್ತಿದೆ. ಖಾಸಗಿ ನೀರು ಸರಬರಾಜು ಕಾರ್ಯ ಕೈಗೊಂಡರೂ ನಿತ್ಯ ಕುಡಿಯುವ ನೀರಿಗಾಗಿ ಪರದಾಡುವುದು ತಪ್ಪಿಲ್ಲ. ಮಹಿಳೆಯರು, ಮಕ್ಕಳಿಗೆ ನಲ್ಲಿಗಳ ಮುಂದೆ ಖಾಲಿ ಕೊಡಗಳನ್ನು ಸರದಿ ಸಾಲಿನಲ್ಲಿ ಇರಿಸಿ ಕಾಯುವ ಪರಿಸ್ಥಿತಿ ಅನಿವಾರ್ಯವಾಗಿದೆ’ ಎನ್ನುತ್ತಾರೆ ಹೊದಲೂರು ನಿವಾಸಿ ಕುಮಾರೇಶ ಸ್ವಾಮಿ.

ADVERTISEMENT

‘ಹೊದಲೂರು ಗ್ರಾಮ ಪಂಚಾಯಿತಿಯು ಎರಡು ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡುತ್ತಿದೆ. ಎಲ್ಲ ವಾರ್ಡ್‌ಗಳ ಮನೆಗಳಿಗೆ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ’ ಎಂದರು.

ನಿಂಬಾಳ, ಕಡಗಂಚಿ, ಹಳ್ಳಿಸಲಗರ, ಧುತ್ತರಗಾಂವ, ಮಾದನ ಹಿಪ್ಪರಗಿ ಕೆರೆಗಳ ನೀರು ಬತ್ತಿದೆ. ಸಾಲೇಗಾಂವ, ದಣ್ಣೂರು, ಶುಕ್ರವಾಡಿ, ಹೊನಳ್ಳಿ, ಆಳಂದ, ತಡಕಲ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಸಹಜವಾಗಿ ಈ ಗ್ರಾಮಗಳ ವ್ಯಾಪ್ತಿಯಲ್ಲಿನ ಕೊಳವೆಬಾವಿಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದೆ.

ತಾಲ್ಲೂಕಿನ ತಾಂಡಾಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿ ಕಾಣುತ್ತಿದೆ. ಪಂಚಾಯಿತಿ ಅಧಿಕಾರಿಗಳು ತಾಂಡಾ ನಿವಾಸಿಗಳ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸುತ್ತಿಲ್ಲ. ಮಹಿಳೆಯರು ಇಡೀ ದಿನ ನೀರಿಗಾಗಿ ಹೊಲ–ಗದ್ದೆಗಳಿಗೆ ಅಲೆದಾಡುವುದು ತಪ್ಪುತ್ತಿಲ್ಲ ಎನ್ನುತ್ತಾರೆ ತಾಂಡಾ ನಿವಾಸಿಗಳು.

ಆಳಂದ ತಾಲ್ಲೂಕಿನ ಝಳಕಿ (ಕೆ) ಗ್ರಾಮದಲ್ಲಿ ಕೊಡದಲ್ಲಿ ಕುಡಿಯುವ ನೀರು ಹಿಡಿದುಕೊಳ್ಳಲು ಮುಗಿ ಬಿದ್ದ ಗ್ರಾಮಸ್ಥರು
ಧಂಗಾಪುರ ಗ್ರಾಮದಲ್ಲಿ 20 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾದರೂ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸಿಲ್ಲ. ಪ್ರತಿಭಟನೆ ನಡೆಸಿದರೂ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ
ಚಂದ್ರಶೇಖರ ಶೇಗಜಿ ಧಂಗಾಪುರ ನಿವಾಸಿ

‘ಖಾಸಗಿ ಕೊಳವೆಬಾವಿಗಳ ಮೊರೆ’ ‘ಏಪ್ರಿಲ್‌ ತಿಂಗಳವರೆಗೂ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆಯುಳ್ಳ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ನರೇಗಾ ಯೋಜನೆಯಡಿ 15 ಸಾವಿರ ಜನರಿಗೆ ಉದ್ಯೋಗ ಒದಗಿಸಲಾಗಿದೆ. ಕೆರೆ ಹೂಳೆತ್ತುವ ಕಾಮಗಾರಿಗೆ ಆದ್ಯತೆ ನೀಡಿದ್ದು ಮುಂದಿನ ಮಳೆಗಾಲದಲ್ಲಿ ನೀರಿನ ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.