
ಆಳಂದ: ತಾಲ್ಲೂಕಿನ ನಿಂಬರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಭೂಸನೂರು ಗ್ರಾಮದ ಹೊಲದಲ್ಲಿ ವಾಸವಾಗಿದ್ದ ಕೃಷಿ ಕೂಲಿಕಾರ್ಮಿಕನು ತನ್ನ ಪತ್ನಿಯನ್ನು ಕೊಲೆಗೈದು ಅವಳ ಶವವನ್ನು ಹೊಲದಲ್ಲಿ ಹೂತಿದ್ದ ಘಟನೆ ನಡೆದಿದೆ.
ಮಶಾಕ್ ಬೀ (38) ಕೊಲೆಯಾದ ಮಹಿಳೆ. ಈಕೆಯ ಪತಿ ಲಾಲಸಾಬ್ ಅಬ್ದುಲ್ ಸಾಬ್ ಗೌಂಡಿ (46) ಹತ್ಯೆಗೈದ ಆರೋಪಿ. ಈ ದಂಪತಿ ಆಳಂದ ತಾಲ್ಲೂಕಿನ ಕೊರಳ್ಳಿ ಗ್ರಾಮದ ನಿವಾಸಿಗಳು. ಮೂವರು ಮಕ್ಕಳಿದ್ದಾರೆ. ಭೂಸನೂರು ಗ್ರಾಮದ ಸಮೀಪದಲ್ಲಿ 20 ಎಕರೆ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಹಲವು ವರ್ಷದಿಂದ ಕೃಷಿ ಚಟುವಟಿಕೆ ಮಾಡುತ್ತಿದ್ದನ. ಕೃಷಿ ಚಟುವಟಿಕೆ ಅನುಕೂಲಕ್ಕಾಗಿ ತೋಟದಲ್ಲಿಯೇ ಕುಟುಂಬ ಸಮೇತ ವಾಸವಾಗಿದ್ದರು.
ಗ್ರಾಮದ ಮಹಿಳೆಯೊಂದಿಗೆ ಪತಿಯು ಅನೈತಿಕ ಸಂಬಂಧ ಹೊಂದಿದ್ದನು. ಈ ಸಂಬಂಧ ಆಗಾಗ್ಗೆ ದಂಪತಿ ನಡುವೆ ಜಗಳ, ತಕಾರಾರಿಗೆ ಕಾರಣವಾಗಿತ್ತು. ಅ.31ರಂದು ಈ ಸಂಬಂಧ ಮತ್ತೆ ಜಗಳ ನಡೆದು ವಿಕೋಪಕ್ಕೆ ತಿರುಗಿ, ಕೋಪದಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿ ಅವಳ ಸೀರೆಯಿಂದಲೇ ಕತ್ತು ಹಿಸುಕಿ ಕೊಲೆ ಮಾಡಿರುವ ಬಗ್ಗೆ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಮೃತಪಟ್ಟ ಪತ್ನಿಯ ಶವವನ್ನು ಯಾರಿಗೂ ಅನುಮಾನ ಬಾರದಂತೆ ಕಬ್ಬಿನ ಹೊಲದಲ್ಲಿ ಶವ ಹೂತ್ತಿದ್ದಾನೆ. ನಂತರ ಪತ್ನಿಯು ಕಾಣೆಯಾಗಿದ್ದಾಳೆ, ಮನೆಯಲ್ಲಿ ಇಲ್ಲ ಎಂದು ಕತೆ ಕಟ್ಟಿ ಸುದ್ದಿ ಹಬ್ಬಿಸಿದ್ದಾನೆ. ಪತ್ನಿಯನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೂ ತೆರಳಿ ದೂರು ನೀಡಿದ್ದಾನೆ.
ಈ ಸಂದರ್ಭದಲ್ಲಿ ಮಹಿಳೆಯ ತವರು ಮನೆಯಿಂದ ಕುಟುಂಬಸ್ಥರೂ ಸಂಶಯ ವ್ಯಕ್ತಪಡಿಸಿ, ನಿಂಬರ್ಗಾ ಪೊಲೀಸ್ ಠಾಣೆಗೆ ಮೃತ ಮಶಾಕ್ ಬೀ ಸಹೋದರ ತನ್ವೀರ್ ಅಕ್ಕನ ಕೊಲೆ ಶಂಕೆ ವ್ಯಕ್ತಪಡಿಸಿ ದೂರು ಸಲ್ಲಿಸಿದ್ದರು. ಇದೇ ಸಂದರ್ಭದಲ್ಲಿ ಪತಿ ಲಾಲಸಾಬ್ ಸಹ ನಿಂಬರ್ಗಾ ಪೊಲೀಸ್ ಠಾಣೆಗೆ ತೆರಳಿ ತನ್ನ ಪತ್ನಿ ಕಾಣೆಯಾಗಿದ್ದು, ಹುಡುಕಿ ಕೊಡಲು ದೂರು ನೀಡಲು ತೆರಳಿದ್ದ ಸಂದರ್ಭದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಪಿಎಸ್‌ಐ ಇಂದುಮತಿ ನೇತೃತ್ವದಲ್ಲಿ ನಿಂಬರ್ಗಾ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿ ಪತಿಯು ತಪ್ಪೊಪ್ಪಿಕೊಂಡಿದ್ದಾನೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಗ್ರೇಡ್ 2 ತಹಶೀಲ್ದಾರ್ ಭೀಮಾಶಂಕರ ಕುದುರಿ, ಡಿವೈಎಸ್‌ಪಿ ತಮ್ಮರಾಯ ಪಾಟೀಲ, ಸಿಪಿಐ ಪ್ರಕಾಶ ಯಾತನೂರು, ಪಿಎಸ್‌ಐ ಇಂದುಮತಿ ಅವರು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.