
ಆಳಂದ: ‘ಮಹಿಳಾ ದೌರ್ಜನ್ಯಗಳು ತಡೆಗಟ್ಟಲು ಮುಖ್ಯವಾಗಿ ಗ್ರಾಮೀಣ ಭಾಗದ ಮಹಿಳೆಯರು, ಯುವಕ, ಯುವತಿಯರಿಗೆ ಮಹಿಳಾಪರ ಕಾನೂನುಗಳ ಅರಿವು ಹೊಂದುವದು ಅಗತ್ಯವಾಗಿದೆ’ ಎಂದು ಕಲಬುರಗಿಯ ಸಖೀ ಮಹಿಳಾ ಕೇಂದ್ರದ ಕಾನೂನು ಸಲಹೆಗಾರ್ತಿ ಪ್ರೇಮಾ ಮೋದಿ ಅಭಿಪ್ರಾಯಪಟ್ಟರು.
ಪಟ್ಟಣದ ಸಂಬುದ್ಧ ಪದವಿ ಕಾಲೇಜಿನಲ್ಲಿ ಆಳಂದದ ಸಾಂತ್ವಾನ ಮಹಿಳಾ ಕೇಂದ್ರ, ಕಲಬುರಗಿಯ ಸಖೀ ಮಹಿಳಾ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ಮಹಿಳಾ ದೌರ್ಜನ್ಯ ತಡೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
‘ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳ ಜಾಸ್ತಿ ವರದಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ವಿಶೇಷವಾಗಿ ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಭದ್ರತೆ ಬಗೆಗೆ ನಮ್ಮ ಕುಟುಂಬ, ಶಾಲೆ ವ್ಯವಸ್ಥೆ ಕಾಳಜಿ ವಹಿಸಿದರೂ ಸಹ ಮೋಸದಿಂದ ಅತ್ಯಾಚಾರ, ದೌರ್ಜನ್ಯ ಎಸಗಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಖೀ, ಸಾಂತ್ವನ ಹಾಗೂ ಮಹಿಳಾ ಸಹಾಯವಾಣಿಗಳ ನೆರವು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಪಾರ್ವತಿ ಜಿಡ್ಡಿಮನಿ ಮಾತನಾಡಿ, ‘ಆಳಂದಲ್ಲಿನ ಸಾಂತ್ವನ ಕೇಂದ್ರಕ್ಕೆ ₹8 ಸಾವಿರ ಮಹಿಳಾ ದೌರ್ಜನ್ಯದ ದೂರುಗಳು ಬಂದಿವೆ. ನೊಂದ ಹಾಗೂ ಅಸಹಾಯಕ ಹೆಣ್ಣುಮಕ್ಕಳಿಗೆ ಅಗತ್ಯ ನೆರವು ಈ ಕೇಂದ್ರ ನೀಡಲಿದೆ. ವಿಶೇಷವಾಗಿ ಆ್ಯಸೀಡ್ ದಾಳಿಗೆ ತುತ್ತಾದ ಮಹಿಳೆಗೆ ಮಾಸಿಕವಾಗಿ ₹10 ಸಾವಿರ ನೆರವು ಸಿಗಲಿದೆ’ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ ಮಾತನಾಡಿದರು. ಪ್ರಾಂಶುಪಾಲ ಸಂಜಯ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಪ್ರಾಧ್ಯಾಪಕಿ ಮಹಾದೇವಿ ಡಿ.ಪಾಟೀಲ, ಮಹಾದೇವಿ ಮುನ್ನೋಳ್ಳಿ, ಶ್ರೀದೇವಿ ಸುತಾರ, ವಿಜಯಲಕ್ಷ್ಮಿ ಪಟ್ನೆ, ಆಯೇಷಾ ಸಿದ್ದಕ್ಕಿ, ಗೀತಾ ಪಾಟೀಲ, ವೀಣಾ ಪಾಟೀಲ, ಸರಸ್ವತಿ ರೆಡ್ಡಿ, ಭೀಮಾಶಂಕರ ಅತನೂರೆ, ಸುಕಮುನಿ ಪಾಟೀಲ ಉಪಸ್ಥಿತರಿದ್ದರು. ಶ್ರೀದೇವಿ ಜಕಾಪುರೆ ನಿರೂಪಿಸಿದರು. ಸುರೇಶ ಪಾಟೀಲ ಸ್ವಾಗತಿಸಿದರು. ಸವಿತಾ ಜೂಜಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.