ADVERTISEMENT

‘ಸಮಸ್ಯೆಗೆ ಮದ್ಯ ಸೇವನೆ ಪರಿಹಾರವಲ್ಲ’

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 10:06 IST
Last Updated 30 ಡಿಸೆಂಬರ್ 2018, 10:06 IST
ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಪಲ್ಲಕ್ಕಿ ಮಹೋತ್ಸವ ಈಚೆಗೆ ಜರುಗಿತು
ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಪಲ್ಲಕ್ಕಿ ಮಹೋತ್ಸವ ಈಚೆಗೆ ಜರುಗಿತು   

ಕಲಬುರ್ಗಿ: ‘ಬದುಕಿನಲ್ಲಿ ಮನುಷ್ಯನಿಗೆ ಹಲವಾರು ಸಮಸ್ಯೆಗಳು ಬರುತ್ತವೆ. ಹಾಗಂತ ಮದ್ಯ ಸೇವನೆ ಸಮಸ್ಯೆಗೆ ಪರಿಹಾರವಲ್ಲ’ ಎಂದು ಜಡೆಯ ಹಿರೇಮಠದ ಅಮರೇಶ್ವರ ಸ್ವಾಮೀಜಿ ಹೇಳಿದರು.

ಜಿಲ್ಲೆಯ ಗಡಿ ಗ್ರಾಮ ದುಧನಿ ಹೊರ ವಲಯದ ಗಾಂಧಿ ನಗರ ತಾಂಡಾ (ಸೋಳಸೆ ತಾಂಡಾ)ದಲ್ಲಿ ಈಚೆಗೆ ಆಯೋಜಿಸಿದ್ದ ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ 23ನೇ ಪಲ್ಲಕ್ಕಿ ಉತ್ಸವದಲ್ಲಿ ಅವರು ಮಾತನಾಡಿದರು.

‘ಮದ್ಯದ ಅಮಲಿಗೆ ಒಳಗಾದವರು ಹೇಗಿರುತ್ತಾರೆ, ಅವರ ಕುಟುಂಬದ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಮದ್ಯ ಕುಡಿಯುವುದನ್ನು ಬಿಡಲು ಪಣತೊಡಬೇಕು. ಗಟ್ಟಿ ಮನಸ್ಸು ಮಾಡಿ ಮದ್ಯಮುಕ್ತ ತಾಂಡಾ ಮಾಡಲು ಸಂಕಲ್ಪ ತೊಡಬೇಕು’ ಎಂದು ತಿಳಿಸಿದರು.

ADVERTISEMENT

‘ಮನುಷ್ಯನ ಬದುಕಿಗೆ ಅನ್ನ, ಬಟ್ಟೆ, ಅಕ್ಷರ, ಅರಿವು, ಆಶ್ರಯ ಬೇಕು. ಇವುಗಳಲ್ಲಿ ಒಂದಿಲ್ಲದಿದ್ದರೂ ನಡೆಯುವುದಿಲ್ಲ. ಆದರೆ, ಮನುಷ್ಯ ಇಂದು ಎಷ್ಟೇ ಪ್ರಗತಿ ಸಾಧಿಸಿದರೂ ಮಾದಕ ವ್ಯಸನಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಲಿಖಿತ ಹೇಳಿಕೆ ನೀಡಿ, ‘ಕುಡಿತದಿಂದ ಮನುಷ್ಯನ ಆರೋಗ್ಯ ಕೆಡುತ್ತದೆ. ಹಣಕಾಸಿನ ತೊಂದರೆ ಎದುರಾಗುತ್ತದೆ. ಸಂಸಾರದಲ್ಲಿ ವಿರಸ ಬರುತ್ತದೆ. ಸಾಮಾಜಿಕವಾಗಿ ಗೌರವ ಕಡಿಮೆ ಆಗುತ್ತದೆ. ಬಹು ಮುಖ್ಯವಾಗಿ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಕುಡಿತದಿಂದ ದೂರವಿರಬೇಕು’ ಎಂದು ಸಂದೇಶ ನೀಡಿದರು.

‘ನೆರೆಯ ಅರ್ಜುಣಗಿ ತಾಂಡಾದಲ್ಲಿ ಎಲ್ಲರೂ ಸೇರಿ ಮಹಿಳೆಯರನ್ನು ಮುಂದು ಮಾಡಿ ತಾಂಡಾವನ್ನು ಮದ್ಯಪಾನ ಮುಕ್ತವಾಗಿಸಿದ್ದಾರೆ. ತಾವೆಲ್ಲರೂ ಏಕೆ ಪ್ರಯತ್ನಿಬಾರದು. ತಾಯಂದಿಯರಿಗೆ ಸಾಧ್ಯವಾಗದ್ದು ಬೇರೆ ಯಾರಿಂದಲೂ ಸಾಧ್ಯವಿಲ್ಲ’ ಎಂದು ಲಿಖಿತ ಹೇಳಿಕೆಯನ್ನು ಭಕ್ತರೊಬ್ಬರು ಓದಿದರು.

ಬಳೂರ್ಗಿ ಮಠದ ಶಂಭುಲಿಂಗ ಸ್ವಾಮೀಜಿ, ಮೂಡಿ ವಿರಕ್ತ ಮಠದ ಸದಾಶಿವ ಸ್ವಾಮೀಜಿ ಉಪಸ್ಥಿತಿಯಲ್ಲಿ ತಾಂಡಾದ ಬೀದಿಗಳಲ್ಲಿ ಮೌನಯೋಗಿಯ ಪಲ್ಲಕ್ಕಿ ಉತ್ಸವ ನಡೆಯಿತು.

ತಾಂಡಾದ ನಾಯಕರಾದ ದತ್ತಾ, ನಾಮದೇವ ರಾಠೋಡ, ಬಿಲ್ಲು ಜಾಧವ, ಶೇವು ರಾಠೋಡ, ಜಗನ್ನಾಥ ಜಾಧವ, ಬಾಬು ರಾಠೋಡ, ನಾನು ಪವಾರ, ದಿಗಂಬರ ಪವಾರ, ಲಕ್ಷ್ಮಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.