ಕಲಬುರಗಿ: ‘ಲಿಂಗರಾಜ ಕಣ್ಣಿ ಅವರ ಪ್ರಕರಣದಲ್ಲಿ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಅವರು ವಿನಾಕಾರಣ ನನ್ನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರಗಳನ್ನು ಎಳೆದು ತರುತ್ತಿದ್ದಾರೆ. ಆಧಾರ ರಹಿತ ಆರೋಪ ಮಾಡುವ ಬದಲು, ಸಾಕ್ಷಿ ಪುರಾವೆ ಸಮೇತ ಸಾಬೀತು ಮಾಡಿ ತೋರಿಸಲಿ’ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದ್ದಾರೆ.
‘ಲಿಂಗರಾಜ ಕಣ್ಣಿ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು. ಪಕ್ಷದಲ್ಲಿದ್ದಾಗ ಜೊತೆಯಲ್ಲಿ ಇದ್ದು ಮಾತನಾಡುವುದು ಇರುತ್ತದೆ. ಹಲವು ಸಭೆ, ಸಮಾರಂಭಗಳಲ್ಲಿನ ಫೋಟೊಗಳನ್ನು ಮುಂದಿಟ್ಟುಕೊಂಡು ಆರೋಪ ಮಾಡುವುದು ಸರಿಯಲ್ಲ. ಸಾಕ್ಷಿ ಪುರಾವೆ ಸಮೇತ ಸಾಬೀತು ಮಾಡಿದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಸ್ವಾಮೀಜಿಯಾದವರು ವಾಸ್ತವ ಅರಿತು ಮಾತನಾಡಬೇಕು. ಹಾದಿಬೀದಿಯಲ್ಲಿ ಹೋಗುವವರು ಬೇಕಾಬಿಟ್ಟಿಯಾಗಿ ಮಾತನಾಡಿದಂತೆ ಉನ್ನತವಾದ ಗುರುಪೀಠದಲ್ಲಿ ಇರುವವರು ಮಾತನಾಡಬಾರದು. ತಳಬುಡವಿಲ್ಲದ ಆರೋಪಗಳನ್ನು ಮಾಡುವ ಮೂಲಕ ನನ್ನ ಹಾಗೂ ಸಚಿವರ ತೇಜೋವಧೆ ಮಾಡುವುದನ್ನು ಸಹಿಸಲಾಗದು’ ಎಂದಿದ್ದಾರೆ.
‘ಧಾರ್ಮಿಕ ಪೀಠದಲ್ಲಿರುವ ಸ್ವಾಮೀಜಿ ರಾಜಕೀಯ ಬೆರೆಸಿ ಮಾತನಾಡಬಾರದು. ಅದು, ಅವರ ಘನತೆಗೆ ಶೋಭೆ ತರುವುದಿಲ್ಲ. ರಾಜಕೀಯ ಮಾಡುವ ಆಸೆ ಹೆಚ್ಚಾಗಿದ್ದರೆ ಕಾವಿ ಬಿಟ್ಟು ಖಾದಿ ತೊಟ್ಟು ಬರಲಿ. ನೇರವಾಗಿ ವಾಗ್ವಾದ ಮಾಡೋಣ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.