ADVERTISEMENT

ಮೂಲ ಅನುಭವ ಮಂಟಪ ಅತಿಕ್ರಮಣ ಆರೋಪ: ಡಿ.10ರಂದು ದೆಹಲಿಗೆ ಮಠಾಧೀಶ ನಿಯೋಗ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2024, 0:19 IST
Last Updated 30 ನವೆಂಬರ್ 2024, 0:19 IST
ಸಿದ್ಧಲಿಂಗ ಸ್ವಾಮೀಜಿ
ಸಿದ್ಧಲಿಂಗ ಸ್ವಾಮೀಜಿ   

ಕಲಬುರಗಿ: ‘ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ ಅತಿಕ್ರಮಣ ಆಗಿರುವ ಮೂಲ ಅನುಭವ ಮಂಟಪವನ್ನು ಮರಳಿ ಪಡೆಯಲು ಒತ್ತಾಯಿಸಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ನೇತೃತ್ವದಲ್ಲಿ ರಾಜ್ಯದ 100ಕ್ಕೂ ಹೆಚ್ಚು ಮಠಾಧೀಶರ ನಿಯೋಗ ಡಿಸೆಂಬರ್‌ 10ರಂದು ದೆಹಲಿಗೆ ತೆರಳಲಿದೆ’ ಎಂದು ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘12ನೇ ಶತಮಾನದಲ್ಲಿ ಬಸವಣ್ಣನವರು ಮತ್ತು 770 ಅಮರಗಣಂಗಳ ಕೂಡಿ ಅನುಭವ ಮಂಟಪವನ್ನು ಸ್ಥಾಪಿಸಲಾಗಿತ್ತು. ಅದು ಅತಿಕ್ರಮಣವಾಗಿ ಪೀರ ಪಾಷಾ ಬಂಗ್ಲಾ ಆಗಿದೆ. ವಕ್ಫ್‌ ಬೋರ್ಡ್‌ನಲ್ಲಿ ಸೇರ್ಪಡೆಯಾಗಿದೆ. ಆದರೆ, ಅಲ್ಲಿನ ಹಿಂದೂ ವಾಸ್ತುಶಿಲ್ಪಗಳು ಮೂಲ ಅನುಭವ ಮಂಟಪದ ಸಾಕ್ಷ್ಯಗಳಾಗಿವೆ. ಸುಮಾರು 3–4 ಎಕರೆ ಇರುವ ಆ ಜಾಗವನ್ನು ಹಿಂದೂಗಳಿಗೆ ಬಿಟ್ಟುಕೊಡಲು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಂಬಂಧಪಟ್ಟ ಕೇಂದ್ರ ಸಚಿವರಿಗೆ, ಜಂಟಿ ಸಂಸದೀಯ ಸಮಿತಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

‘ಮೊಘಲರ ಆಳ್ವಿಕೆ ಪ್ರಾರಂಭ ಆದಾಗಿನಿಂದ ದೇಶದ ಮೂಲ ಆಸ್ತಿಗಳ ಕಬಳಿಕೆ ಮತ್ತು ಅದರ ವಸ್ತುಸ್ಥಿತಿ ಹಾಳಾಗಲು ಶುರುವಾಯಿತು. ಮೂಲ ಅನುಭವ ಮಂಟಪ ಕೂಡ ಇದಕ್ಕೆ ಹೊರತಾಗಿಲ್ಲ. ಮುಂದೆ ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿ ನಿಜಾಮರ ವಶವಾಗಿ ಪೀರಪಾಷಾ ಬಂಗ್ಲಾ ಆಗಿದ್ದು, ಅಲ್ಲಿ ಗೋರಿಗಳನ್ನು ನಿರ್ಮಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಬಿಜೆಪಿಯವರು ಬಸವತತ್ವ ವಿರೋಧಿಗಳು ಎಂದು ಸಚಿವರಾದ ಎಂ.ಬಿ.ಪಾಟೀಲ, ಪ್ರಿಯಾಂಕ್‌ ಖರ್ಗೆ, ಈಶ್ವರ ಖಂಡ್ರೆ, ಡಾ.ಶರಣಪ್ರಕಾಶ ಪಾಟೀಲ ಪಟ್ಟಕಟ್ಟಿದ್ದಾರೆ. ಬಸವಣ್ಣನವರ ಬಗ್ಗೆ ಇವರಿಗೆ ನಿಜವಾದ ಕಾಳಜಿ, ಅಭಿಮಾನ ಇದ್ದರೆ ಮೂಲ ಅನುಭವ ಮಂಟಪವನ್ನು ಮುಕ್ತ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು. ಗೋರಿಗಳನ್ನು ಸ್ಥಳಾಂತರಿಸಬೇಕು’ ಎಂದು ಸವಾಲು ಹಾಕಿದರು.

ಗುರುಮೂರ್ತಿ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು, ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.