ADVERTISEMENT

ವಿದ್ಯುನ್ಮಾನ ಮತಯಂತ್ರಗಳ ಹಂಚಿಕೆ: ಭದ್ರತೆ

ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ 2,380 ಮತಗಟ್ಟೆಗಳ ನಿರ್ಮಾಣ

ಎಲ್‌.ಮಂಜುನಾಥ್‌.ಸಾಸಲು, ದೊಡ್ಡಬಳ್ಳಾಪುರ ತಾ.
Published 8 ಏಪ್ರಿಲ್ 2023, 15:42 IST
Last Updated 8 ಏಪ್ರಿಲ್ 2023, 15:42 IST
ಇವಿಎಂ, ಬ್ಯಾಲೆಟ್‌ ಯುನಿಟ್‌ ಯಂತ್ರಗಳು
ಇವಿಎಂ, ಬ್ಯಾಲೆಟ್‌ ಯುನಿಟ್‌ ಯಂತ್ರಗಳು   

ಕಲಬುರಗಿ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿಯೂ ಚುನಾವಣೆ ಕಾರ್ಯ ಚಟುವಟಿಕೆ ಬಿರುಸುಗೊಂಡಿದ್ದು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟೆ ಕೇಂದ್ರಗಳಿಗೆ ಇವಿಎಂ (ವಿದ್ಯುನ್ಮಾನ ಮತಯಂತ್ರ) ಹಾಗೂ ವಿವಿ ಪ್ಯಾಟ್‌ಗಳ ಹಂಚಿಕೆ ಪ್ರಕ್ರಿಯೆಯು ಗುರುವಾರ ನಡೆಯಿತು.

ಜಿಲ್ಲಾಡಳಿತವು ಈಗಾಗಲೇ 9 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 2,380 ಮತಗಟ್ಟೆಗಳನ್ನು ನಿರ್ಮಿಸಿದ್ದು, ವಿಧಾನಸಭಾ ಕ್ಷೇತ್ರವಾರು ಸಂಬಂಧಿಸಿದಂತೆ ಬ್ಯಾಲೆಟ್‌ ಯೂನಿಟ್‌, ಕಂಟ್ರೊಲ್ ಯೂನಿಟ್‌ ಹಾಗೂ ವಿವಿ ಪ್ಯಾಟ್‌ಗಳನ್ನು ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಯ ಸಮ್ಮುಖದಲ್ಲಿ ಹಂಚಿಕೆ ಕಾರ್ಯ ಮಾಡಲಾಗಿದೆ.

’ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮಾರ್ಗ ಸೂಚಿಯ ಅನ್ವಯ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಎದುರು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ)ಗಳ ಕಂಪ್ಯೂಟರ್‌ ಆಧಾರಿತ ಪ್ರಥಮ ರ್‍ಯಾಂಡಮ್‌ ಪ್ರಕ್ರಿಯೆ ನಡೆಸಿ, ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಬ್ಯಾಲೆಟ್‌ ಯೂನಿಟ್‌, ಕಂಟ್ರೊಲ್‌ ಯೂನಿಟ್‌ ಮತ್ತು ವಿವಿ ಪ್ಯಾಟ್‌ಗಳನ್ನು ಹಂಚಿಕೆ ಮಾಡಲಾಗಿದ್ದು, ಈಗಾಗಲೇ ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳನ್ನು ಭದ್ರವಾಗಿ ಇರಿಸಲಾಗಿದೆ.

ADVERTISEMENT

ನಂತರದ ದಿನಗಳಲ್ಲಿ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಮತಯಂತ್ರಗಳ ಎರಡನೇ ರ‍್ಯಾಂಡಮ್‌ ಪ್ರಕ್ರಿಯೆ ನಡೆಯಲಿದೆ.

ಈ ವೇಳೆಯಲ್ಲಿ ಯಾವ ಮತಯಂತ್ರ ಯಾವ ಮತಗಟ್ಟೆಗೆ ಹೋಗುತ್ತದೆ ಎಂಬುದು ತಿಳಿಯುತ್ತದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್‌ ಅವರು ಹೇಳಿದರು.

‘ವಿಧಾನಸಭಾ ಕ್ಷೇತ್ರವಾರು ಅನ್ವಯ ಈಗಾಗಲೆ ಹಂಚಿಕೆಯಾಗಿರುವ ಬ್ಯಾಲೆಟ್‌ ಯುನಿಟ್‌, ಕಂಟ್ರೊಲ್‌ ಯುನಿಟ್‌ ಮತ್ತು ವಿವಿ ಪ್ಯಾಟ್‌ಗಳ ಜೊತೆಗೆ ಹೆಚ್ಚುವರಿಯಾಗಿ ಶೇ 20ರಷ್ಟು ಬ್ಯಾಲೆಟ್‌ ಯೂನಿಟ್‌, ಕಂಟ್ರೊಲ್ ಯೂನಿಟ್‌ ಹಾಗೂ ಶೇ 30ರಷ್ಟು ವಿವಿ ಪ್ಯಾಟ್‌ಗಳನ್ನೂ ನೀಡಿದ್ದು, ಮತದಾನದ ವೇಳೆಯಲ್ಲಿ ಅವುಗಳಲ್ಲಿ ಯಾವುದಾದರೂ ತಾಂತ್ರಿಕ ದೋಷಗಳು ಕಾಣಿಸಿಕೊಂಡಲ್ಲಿ ತಕ್ಷಣ ಮತ್ತೊಂದು ಬ್ಯಾಲೆಟ್‌ ಯೂನಿಟ್‌ನ್ನು ಅಳವಡಿಸುವ ಮೂಲಕ ಸುಗಮ ಹಾಗೂ ನ್ಯಾಯಯುತ ಮತದಾನ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ‘ ಎಂದು ಚುನಾವಣಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮತದಾನ ಜಾಗೃತಿ

ಮತದಾನದ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 1,161 ಮತಗಟ್ಟೆ ಕೇಂದ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷಿಕೆ ಕಾರ್ಯ ಮಾಡಲಾಗಿದೆ. 2ನೇ ಹಂತದ ಪ್ರಾತ್ಯಕ್ಷಿಕೆಯನ್ನು ಕ್ಷೇತ್ರವಾರು ಚುನಾವಣಾಧಿಕಾರಿಗಳು ಅವರವರ ಮತಗಟ್ಟೆ ಕೇಂದ್ರಗಳಲ್ಲಿ ಮಾಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಈಗಾಗಲೇ ಬ್ಯಾಲೆಟ್‌ ಯಂತ್ರಗಳ ಕಾರ್ಯನಿರ್ವಹಣೆ ಪ್ರಾತ್ಯಕ್ಷಿಕೆಯ ಮೂಲಕ ಮತದಾರನಿಗೆ ಮತದಾನದ ಖಾತರಿ ಒದಗಿಸುವ ವ್ಯವಸ್ಥೆ ಕುರಿತು ಮಾಹಿತಿಯನ್ನೂ ನೀಡಲಾಗಿದೆ‘ ಎಂದರು.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.