ಕಲಬುರಗಿ: ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಪ್ರಮುಖ ನಗರಗಳಾದ ಕಲಬುರಗಿ ಮತ್ತು ಬೆಳಗಾವಿ ನಡುವೆ ಹೊಸ ರೈಲು ಓಡಿಸುವಂತೆ ಬಿಜೆಪಿ ಮುಖಂಡ ಅಮರನಾಥ ಪಾಟೀಲ ಅವರು ಸಂಸದ ಜಗದೀಶ ಶೆಟ್ಟರ್ ಅವರಿಗೆ ಮನವಿ ಮಾಡಿದರು.
ಉಭಯ ಜಿಲ್ಲೆಗಳ ನಡುವೆ ಹೊಸ ರೈಲು ಓಡಿಸುವಂತೆ ಹೆಚ್ಚಿನ ಪ್ರಯಾಣಿಕರು ಮನವಿ ಮಾಡುತ್ತಿದ್ದಾರೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಗುಂತಕಲ್, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ ಮತ್ತು ಬೆಳಗಾವಿ ಮಾರ್ಗವಾಗಿ ಓಡಿಸುವಂತೆ ಈಚೆಗೆ ನಗರಕ್ಕೆ ಭೇಟಿ ನೀಡಿದಾಗ ಸಂಸದರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಉನ್ನತಾಧಿಕಾರಿ ಸಮಿತಿಯ ವರದಿಯಲ್ಲಿ ಶಿಫಾರಸು ಮಾಡಿದಂತೆ ರಾಜ್ಯದಲ್ಲಿ ರೈಲ್ವೆ ಸಂಪರ್ಕ ವಿಸ್ತರಿಸಲು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ರೈಲು ಸಂಪರ್ಕ ಮಾಡಬೇಕು. ಬಾಗಲೋಕಟೆ ಮಾರ್ಗವಾಗಿ ಬೆಳಗಾವಿ ಮತ್ತು ಕಲಬುರಗಿ ನಡುವೆ ರೈಲುಗಳು ಸಂಚಾರ ಮಾಡುವಂತೆ ಆಗಬೇಕು. ಮುಂಬೈ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಹಾಗೂ ವಾಸ್ಕೊ ನಡುವೆ ರೈಲು ಸೇವೆ ಲಭ್ಯವಾಗಬೇಕು ಎಂದು ವರದಿಯಲ್ಲಿ ಉಲ್ಲೇಖಿಸಿತ್ತು ಎಂದು ಸಂಸದರ ಗಮನಕ್ಕೆ ತಂದಿದ್ದಾರೆ.
ಈ ವೇಳೆ ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮುಖಂಡರಾದ ಹರ್ಷಾನಂದ ಗುತ್ತೇದಾರ, ಶರಣಪ್ಪ ತಳವಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.