ಬಂಧನ
(ಪ್ರಾತಿನಿಧಿಕ ಚಿತ್ರ)
ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತೋತ್ಸವ ಸಮಿತಿ ಅಧ್ಯಕ್ಷ ಶಂಕರ ಅಳ್ಳೊಳ್ಳಿ ಮೇಲೆ ಇತ್ತೀಚೆಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಕಲಬುರಗಿಯ ರಾಜಾಪುರ ನಿವಾಸಿ ಶುಭಂ ಅಲಿಯಾಸ್ ಟಿಕ್ಕಿ ದೊಡ್ಡಮನಿ, ಹೌಸಿಂಗ್ ಬೋರ್ಡ್ ಕಾಲೊನಿಯ ಮಲ್ಲಿಕಾರ್ಜುನ ಮೇಲಿನಕೇರಿ, ಶಹಾಬಾದ್‌ನ ಸ್ಟೇಷನ್ ತಾಂಡಾ ವಿಕ್ರಂ ಅಲಿಯಾಸ್ ವಿಕ್ಕಿ ನಾಯಕ, ಕಲಬುರಗಿಯ ರಾಮಜಿನಗರ ನಿವಾಜಿ ಬಸವರಾಜ ಶಂಕರಕೇರಿ ಹಾಗೂ ಡಬರಾಬಾದ್ ಪ್ರದೇಶದ ಸುನೀಲ ಚಿತಲಿ ಬಂಧಿತ ಆರೋಪಿಗಳು.
ಆರೋಪಿಗಳನ್ನು ಕಲಬುರಗಿಯ ಹುಮನಾಬಾದ್ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಬೊಲೆರೊ ವಾಹನ, ಎರಡು ತಲ್ವಾರ್ ಹಾಗೂ ಒಂದು ಕೊಡಲಿ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಆರೋಪಿಗಳ ಮೇಲೆ ಕಲಬುರಗಿಯ ಅಶೋಕನಗರ ಠಾಣೆ, ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಹಾಗೂ ವಾಡಿ ರೈಲ್ವೆ ಪೊಲೀಸ್ ಠಾಣೆಗಳಲ್ಲಿ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಹಾಬಾದ್ ನಗರದ ಹೊರ ವಲಯದ ಭಂಕೂರ ಶಾಂತ ನಗರದ ಐನಾಪೂರ ಡಾಬಾದಲ್ಲಿ ಶಂಕರ ಅಳ್ಳೊಳ್ಳಿ ಗೆಳೆಯರೊಂದಿಗೆ ಊಟ ಮಾಡುತ್ತಿರುವ ಸಂದರ್ಭದಲ್ಲಿ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಈ ವೇಳೆ ಗಾಯದ ನಡುವೆಯೂ ಶಂಕರ ತಪ್ಪಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.