ADVERTISEMENT

ಹಿತ್ತಲ ಶಿರೂರು: ಡಾ.ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ

ಗಣರಾಜ್ಯೋತ್ಸವದಂದು ಕಿಡಿಗೇಡಿ ಕೃತ್ಯ, ಮೂವರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 12:57 IST
Last Updated 26 ಜನವರಿ 2020, 12:57 IST
ಆಳಂದ ತಾಲ್ಲೂಕಿನ ಹಿತ್ತಲ ಶಿರೂರು ಗ್ರಾಮದಲ್ಲಿನ ಡಾ.ಅಂಬೇಡ್ಕರ್‌ ಭಾವಚಿತ್ರದ ಫಲಕಕ್ಕೆ ಕಿಡಿಗೇಡಿಗಳಿಂದ ಅವಮಾನ.
ಆಳಂದ ತಾಲ್ಲೂಕಿನ ಹಿತ್ತಲ ಶಿರೂರು ಗ್ರಾಮದಲ್ಲಿನ ಡಾ.ಅಂಬೇಡ್ಕರ್‌ ಭಾವಚಿತ್ರದ ಫಲಕಕ್ಕೆ ಕಿಡಿಗೇಡಿಗಳಿಂದ ಅವಮಾನ.   

ಆಳಂದ: ತಾಲ್ಲೂಕಿನ ಹಿತ್ತಲ ಶಿರೂರು ಗ್ರಾಮದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್‌ ಭಾವಚಿತ್ರದ ಫಲಕಕ್ಕೆ ಕಿಡಿಗೇಡಿಗಳು ಅವಮಾನಿಸಿದ ಘಟನೆ ನಡೆದಿದೆ.

ಸಂವಿಧಾನ ಜಾರಿಗೆ ಬಂದ ದಿನವೇ ಸಂವಿಧಾನ ಶಿಲ್ಪಿಗೆ ಅವಮಾನಿಸಿದ ಈ ದುಷ್ಕೃತ್ಯವು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಕುರಿತು ವಿವಿಧ ದಲಿತಪರ ಸಂಘಟನೆಗಳಿಂದ ಮುಖ್ಯರಸ್ತೆ ತಡೆದು ಖಂಡನೆ, ಪ್ರತಿಭಟನೆ ವ್ಯಕ್ತವಾದ ಬೆನ್ನಲ್ಲೆ ನಿಂಬರ್ಗಾ ಪೊಲೀಸ್‌ರು ಗ್ರಾಮದ 3 ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸುದ್ದಿ ತಿಳಿಯುತ್ತಲೇದಲಿತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಿತ್ತಲ ಶಿರೂರು ಗ್ರಾಮಕ್ಕೆ ಭೇಟಿ ನೀಡಿದರು.

ಡಾ.ಅಂಬೇಡ್ಕರ್ ಫಲಕವುಳ್ಳ ಸರ್ಕಾರಿ ಜಮೀನು ಸಮಾಜದ ಹೆಸರಿಗೆ ವರ್ಗಾಯಿಸಬೇಕು. ಹೊಸ ಫಲಕ ಮತ್ತು ಧ್ವಜಕಟ್ಟೆ ನಿರ್ಮಿಸಬೇಕು. ಈ ದುಷ್ಕೃತ್ಯಕ್ಕೆ ಕಾರಣರಾದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಿದರು.

ADVERTISEMENT

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಡಾ ಮಾರ್ಟಿನ್‌, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ, ತಹಶೀಲ್ದಾರ್ ದಯಾನಂದ ಪಾಟೀಲ, ಡಿವೈಎಸ್‌ಪಿ ವಿಜಯಕುಮಾರ ಸಾಲಿ ಭೇಟಿ ನೀಡಿ ಪರಿಶೀಲಿಸಿದರು.

ದಲಿತ ಹಿರಿಯ ಮುಖಂಡ ವಿಠಲ ದೊಡ್ಡಮನಿ, ಮಾಜಿ ಶಾಸಕ ಬಿ.ಆರ್.ಪಾಟೀಲ, ಜಿ.ಪಂ ಸದಸ್ಯ ಸಿದ್ದರಾಮ ಪ್ಯಾಟಿ, ಮುಖಂಡರಾದ ಪ್ರಕಾಶ ಮೂಲಭಾರತಿ, ಮಹಾದೇವ ಧನ್ನಿ, ಅರ್ಜುನ ಭದ್ರೆ, ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಜಿಲ್ಲಾಧ್ಯಕ್ಷ ಡಿ.ಕೆ.ಮದನಕರ್, ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ, ತಾಲ್ಲೂಕಾಧ್ಯಕ್ಷ ಧರ್ಮಾ ಬಂಗರಗಾ, ಭೀಮ್ ಆರ್ಮಿ ಅಧ್ಯಕ್ಷ ಸೂರ್ಯಕಾಂತ ಜಿಡಗಾ, ಶರಣು ಕವಲಗಾ, ಶಿವಪುತ್ರ ನಡಗೇರಿ, ಜೈಕಾಂತ ವಾಗ್ಮೋರೆ ಇದ್ದರು.

ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ. ಪೊಲೀಸ್‌ರು ಗ್ರಾಮದ ಕೆಲ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.