ADVERTISEMENT

‘ಆಧುನಿಕ ಭಾರತ‌ ನಿರ್ಮಾತೃ ಅಂಬೇಡ್ಕರ್'

ಭೈರಾಮಡಗಿ ಗ್ರಾಮದಲ್ಲಿ ಮೂರ್ತಿ ಅನಾವರಣಗೊಳಿಸಿದ ಶಾಸಕ ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 13:05 IST
Last Updated 17 ನವೆಂಬರ್ 2020, 13:05 IST
ಅಫಜಲಪುರ ತಾಲ್ಲೂಕಿನ ಭೈರಾಮಡಗಿ ಗ್ರಾಮದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ಶಾಸಕ ಪ್ರಿಯಾಂಕ್ ಖರ್ಗೆ ಅನಾವರಣ ಮಾಡಿದರು. ಅಫಜಲಪುರ ಶಾಸಕ ಎಂ.ವೈ. ಪಾಟೀಲ ಇದ್ದರು
ಅಫಜಲಪುರ ತಾಲ್ಲೂಕಿನ ಭೈರಾಮಡಗಿ ಗ್ರಾಮದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ಶಾಸಕ ಪ್ರಿಯಾಂಕ್ ಖರ್ಗೆ ಅನಾವರಣ ಮಾಡಿದರು. ಅಫಜಲಪುರ ಶಾಸಕ ಎಂ.ವೈ. ಪಾಟೀಲ ಇದ್ದರು   

ಕಲಬುರ್ಗಿ: ಆಧುನಿಕ‌ ಭಾರತದ ನಿರ್ಮಾತೃ ಡಾ.ಬಾಬಾಸಾಹೇಬ್ ಅಂಬೇಡ್ಕರ್. ಅವರು ದೂರದೃಷ್ಟಿಯಿಂದ ರಚಿಸಿದ ಸಂವಿಧಾನದ ಅಡಿಯಲ್ಲಿ ಕೇವಲ ದಲಿತರು ಮಾತ್ರವಲ್ಲದೇ ಎಲ್ಲ ಜನಾಂಗದ ಜನರು ಸ್ವಾಭಿಮಾನದಿಂದ ಬದುಕು ಕಲ್ಪಿಸಿಕೊಟ್ಟ ಮಹಾನ್ ನಾಯಕ ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಬಣ್ಣಿಸಿದರು.

ಅಫಜಲಪುರ ತಾಲ್ಲೂಕಿನ ಭೈರಾಮಡಗಿ ಗ್ರಾಮದಲ್ಲಿ ಮಂಗಳವಾರ ಪಂಚಲೋಹದಲ್ಲಿ ಸ್ಥಾಪಿಸಲಾದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಪುತ್ಥಳಿಯನ್ನು‌ ಅನಾವರಣಗೊಳಿಸಿ‌ ಅವರು ಮಾತನಾಡಿದರು.

ಇತಿಹಾಸಕಾರ ರಾಮಚಂದ್ರ ಗುಹಾ ಅವರ ಲೇಖನಿಯೊಂದನ್ನು ಉಲ್ಲೇಖಿಸಿ ಮಾತನಾಡಿದ ಶಾಸಕರು, ದೇಶದ ಇತಿಹಾಸದಲ್ಲಿ ಯಾರಾದರೂ ಅನ್ಯಾಯಕ್ಕೊಳಗಾದವರು ಇದ್ದರೆ ಅವರು ಅಂಬೇಡ್ಕರ್. ಅವರನ್ನು ಕೇವಲ ದಲಿತರ ನಾಯಕ ಎಂಬಂತೆ ಬಿಂಬಿಸಲಾಗುತ್ತಿದೆ.‌ ನಂತರ ಜವಾಹರ ಲಾಲ್ ನೆಹರೂ, ವಲಭಭಾಯಿ ಪಟೇಲ್ ಹಾಗೂ ರವೀಂದ್ರನಾಥ್ ಟ್ಯಾಗೋರ್ ಅವರನ್ನೂ ಕೇವಲ ಒಂದು ರಾಜ್ಯ ಹಾಗೂ ಪಕ್ಷಕ್ಕೆ ಸೀಮಿತಗೊಳಿಸಲಾಗಿದೆ‌ ಎಂದು‌ ವಿಷಾದಿಸಿದರು.

ADVERTISEMENT

ಪ್ರಬುದ್ಧ ಭಾರತದ ಕನಸು ಕಂಡಿದ್ದ ಡಾ. ಬಾಬಾಸಾಹೇಬರನ್ನು ಜನಸಾಮಾನ್ಯರಲ್ಲದೇ ಆಡಳಿತ ನಡೆಸುವವರು ಕೂಡಾ ಓದಿಕೊಂಡಿಲ್ಲ. 224 ಶಾಸಕರು ಅಂಬೇಡ್ಕರ್ ಅವರ ಕುರಿತಾದ ಪುಸ್ತಕಗಳ ಇಪ್ಪತ್ತು ಪುಟ ಓದಿದರೆ ಸಾಕು. ಆದರೆ, ಅಷ್ಟೊಂದು ಓದುವ ಇಚ್ಛೆ ಯಾವ ಶಾಸಕರಿಗಿದೆ ಎಂದು ಪ್ರಶ್ನಿಸಿದರು.

’ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳ ಸಂವಿಧಾನವನ್ನು ಅಭ್ಯಸಿಸಿದ ಅಂಬೇಡ್ಕರ್ ಅವರು ಪ್ರಜಾತಂತ್ರದ ತಳಹದಿಯ ಮೇಲೆ ಪರಿಕಲ್ಪನೆಗೊಂಡ ಸಂವಿಧಾನ ರಚನೆ ಮಾಡುವ ಸಂದರ್ಭದಲ್ಲಿ ಬಹಳ ಕಠಿಣ ಹಾದಿಯನ್ನು ಸವೆಸಬೇಕಾಗಿ‌ ಬಂದಿತ್ತು. ನಮ್ಮ‌ದೇಶ ಸ್ವಾತಂತ್ರ್ಯ ಪಡೆದ‌ ಸಂದರ್ಭದಲ್ಲಿ‌ ಸ್ವಾತಂತ್ರ್ಯ ಪಡೆದ 35 ರಾಷ್ಟ್ರಗಳು ಇಂದು ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ಉಳಿಯದೇ ಏಕ‌ ವ್ಯಕ್ತಿ ಆಡಳಿತದ ಸರ್ವಾಧಿಕಾರಿ ರಾಷ್ಟ್ರಗಳಾಗಿ ಉಳಿದಿವೆ. ನಮ್ಮ ರಾಷ್ಟ್ರ ಮಾತ್ರ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿದೆ ಎನ್ನುವುದಕ್ಕೆ ಕಾರಣ ಬಾಬಾಸಾಹೇಬರ ಸಂವಿಧಾನ ಕಾರಣ‘ ಎಂದರು.

ಶಾಸಕ ಎಂ.ವೈ.ಪಾಟೀಲ ಮಾತನಾಡಿ, ’ಕೇವಲ ಬಾಬಾಸಾಹೇಬರ ಪುತ್ಥಳಿ ಅನಾವರಣ ಮಾಡಿದರೆ ಅಷ್ಟೇ ಸಾಲದು. ಅವರ ಮಾರ್ಗದರ್ಶನ ಹಾಗೂ ಆಶಯದಂತೆ ಎಲ್ಲರೂ ಶಿಕ್ಷಿತರಾಗಿ ಸಂಘಟಿತರಾಗಿ ನ್ಯಾಯಪರವಾಗಿ ಹೋರಾಟ ಮಾಡಬೇಕು ಎಂದರು.

ಸಂವಿಧಾನದಂತ ಶ್ರೇಷ್ಠ ಗ್ರಂಥ ಮತ್ತೊಂದಿಲ್ಲ. ಸಂವಿಧಾನದಕ್ಕೆ ಗಂಡಾಂತರ ತರುವಂತಹ ಶಕ್ತಿಗಳು ತಲೆ ಎತ್ತಿವೆ. ಅಂತಹ ದಮನಕಾರಿ ಶಕ್ತಿಗಳ ವಿರುದ್ಧ ಸಂಘಟಿತರಾಗಿ ಸಂವಿಧಾನವನ್ನು ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಹೇಳಿದರು.

ದೇಶವನ್ನು ಧರ್ಮದ ಬದಲಾಗಿ ಸಂವಿಧಾನ ಆಳಬೇಕು ಎಂದು ಮೈಸೂರಿನ ಉರಿಲಿಂಗಪೆದ್ದಿ ಸಂಸ್ಥಾನದ ಡಾ. ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹಿಸಿದರು.

ಧರ್ಮದ ಹೆಸರಿನಲ್ಲಿ ಏನೇನೂ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಬುದ್ದನ ಶಾಂತಿ, ಬಸವಣ್ಣನವರ ಕ್ರಾಂತಿ ಹಾಗೂ ಅಂಬೇಡ್ಕರರ ಜ್ಞಾನ ಅಳವಡಿಸಿಕೊಂಡಿರುವ ಸಂವಿಧಾನದಂತ ಶ್ರೇಷ್ಠಗ್ರಂಥ ದೇಶದಲ್ಲಿ ಮತ್ತೊಂದಿಲ್ಲ. ಹಾಗಾಗಿ, ಆಳುವವರು ಧರ್ಮವನ್ನು ಅನುಸರಿಸುವುದು ಬಿಡಬೇಕು ಸಂವಿಧಾನವನ್ನು ಅನುಸರಿಸಬೇಕು ಎಂದು ಹೇಳಿದರು.

ಇದಕ್ಕೂ ಮುನ್ನ ₹ 4.71 ಕೋಟಿ ವೆಚ್ಚದಲ್ಲಿ ಅಫಜಲಪುರ ಪಟ್ಟಣದಲ್ಲಿ ನಿರ್ಮಿಸಲಾಗಿರುವ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ‌ನಿಲಯ ಉದ್ಘಾಟಿಸಿ,‌ ಭೈರಾಮಡಗಿ ಗ್ರಾಮದಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವ ಸಿ.ಸಿ. ರಸ್ತೆ ನಿರ್ಮಾಣಕ್ಕೆ‌ ಶಿಲನ್ಯಾಸ ನೆರವೇರಿಸಲಾಯಿತು.

ವಿಧಾನಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರು, ಸಮಾಜ ಸೇವಕ ಜೆ‌.ಎಂ‌.ಕೊರಬು, ಜಿ.ಪಂ‌. ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಜಿ.ಪಂ. ಸದಸ್ಯರಾದ ಶಿವಾನಂದ ಪಾಟೀಲ, ಶಿವರುದ್ರ‌ ಭೀಣಿ, ಶಿವಕುಮಾರ‌ ನಾಟೀಕಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.