
ಬಸವರಾಜ ಹರವಾಳ
ಕಲಬುರಗಿ: ‘ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಜ.21ರಂದು ಎಲ್ಲಾ ಶಾಲಾ–ಕಾಲೇಜು ಮತ್ತು ಸರ್ಕಾರಿ ಕಚೇರಿಗಳಲ್ಲಿ ಆಚರಿಸುವ ಜೊತೆಗೆ ಚೌಡಯ್ಯನವರ ಕುರಿತು ಚರ್ಚೆ, ಸಂವಾದ, ಕವಿಗೋಷ್ಠಿ ಹಾಗೂ ಉಪನ್ಯಾಸ ಆಯೋಜಿಸಲು ಸರ್ಕಾರದ ವತಿಯಿಂದ ಆದೇಶಿಸಬೇಕು’ ಎಂದು ಕರ್ನಾಟಕ ರಾಜ್ಯ ಟೋಕರೆ ಕೋಲಿ–ಕಬ್ಬಲಿಗ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಎಸ್.ಹರವಾಳ ಆಗ್ರಹಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚೌಡಯ್ಯನವರು 12ನೇ ಶತಮಾನದ ಬಸವಣ್ಣನವರ ಸಮಕಾಲೀನರು. ವಚನಕಾರರಲ್ಲಿ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದ ಅವರು ನೇರ, ನಿಷ್ಠುರ ನುಡಿಗಳಿಂದ ಹೆಸರಾಗಿದ್ದರು. ಅವರ ಜಯಂತಿಯನ್ನು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಿಸುವಂತೆ ನಿರ್ದೇಶನ ನೀಡಲು ಮುಖ್ಯಮಂತ್ರಿ, ಶಾಲಾ ಶಿಕ್ಷಣ, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಭೇಟಿಯಾಗಿ ಮನವಿ ಪತ್ರ ಸಲ್ಲಿಸಲಾಗಿದೆ. ಭರವಸೆ ನೀಡಿದರೂ ಈವರೆಗೂ ಸರ್ಕಾರದ ಆದೇಶ ಬಂದಿಲ್ಲ’ ಎಂದು ದೂರಿದರು.
‘ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಚೆಗೆ ನಡೆದ ಜಯಂತಿ ಪೂರ್ವಭಾವಿ ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸಲಾಗಿದೆ. ಜಯಂತಿ ಇನ್ನು ಕೆಲವೇ ದಿನ ಉಳಿದಿದ್ದು, ಕೂಡಲೇ ಸರ್ಕಾರದ ವತಿಯಿಂದ ಆದೇಶ ಹೊರಡಿಸಬೇಕು’ ಎಂದು ಒತ್ತಾಯಿಸಿದರು.
ರೇವಣಸಿದ್ದಪ್ಪ ಹಲಚೇರಿಕರ್, ಬಾಬೂರಾವ ಚೇಂಗಟಾ, ನಾಮದೇವ ಪಾಟೀಲ, ಶ್ರೀಮಂತ ಸಾಗನೂರ, ಅವದೂತ ಇಟಗಾ, ಅಪ್ಪಾಸಾಬ ಮಳ್ಳಿ, ಈರಣ್ಣ ಲಕಬೋ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.