ADVERTISEMENT

ಕಲಬುರ್ಗಿ ಜಿಲ್ಲೆಯಲ್ಲಿವೆ ಕೇವಲ 55 ಆಂಬುಲೆನ್ಸ್‌

ಆಂಬುಲೆನ್ಸ್ ಚಾಲಕ, ವೈದ್ಯ, ನರ್ಸ್‌ಗಳಿಗಳಿಗೂ ಕೊರಿನಾ ವಿಶೇಷ ಸುರಕ್ಷಾ ಕವಚ ವಿತರಣೆ

ಸಂತೋಷ ಈ.ಚಿನಗುಡಿ
Published 24 ಮಾರ್ಚ್ 2020, 19:45 IST
Last Updated 24 ಮಾರ್ಚ್ 2020, 19:45 IST
ಆಂಬುಲೆನ್ಸ್‌
ಆಂಬುಲೆನ್ಸ್‌   

ಕಲಬುರ್ಗಿ: ಕೊರೊನಾ ವೈರಾಣು ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಜಿಲ್ಲೆಯಲ್ಲಿ ಒಟ್ಟು 55 ಆಂಬುಲೆನ್ಸ್‌ಗಳು ಇವೆ. ಇದರಲ್ಲಿ 30 ಆಂಬುಲೆನ್ಸ್‌ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಸ್ಪತ್ರೆಗಳಲ್ಲಿದ್ದರೆ, 25 ಆರೋಗ್ಯ ಕವಚ ಏಜೆನ್ಸಿ ಸುಪರ್ದಿಯಲ್ಲಿವೆ.

ನಗರದಲ್ಲಿ ಕೇವಲ ನಾಲ್ಕು ಆಂಬುಲೆನ್ಸ್‌ ಮಾತ್ರ ಮೀಸಲಿಟ್ಟಿದ್ದು, ಇದರಲ್ಲಿ ಎರಡು ಜಿಮ್ಸ್‌ಗೆ ಇನ್ನೆರಡು ಆರೋಗ್ಯ ಮತ್ತು ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೆಲಸಗಳಿಗೆ ಮೀಸಲಿಡಲಾಗಿದೆ.

ಸದ್ಯ (ಮಾರ್ಚ್‌ 24) ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿತರು ಇಬ್ಬರು (ಮೃತಪಟ್ಟ ವ್ಯಕ್ತಿಯನ್ನೂ ಹೊರತುಪಡಿಸಿ) ಇದ್ದಾರೆ. ಮಂಗಳವಾರದ ಹೊತ್ತಿಗೆ ಒಟ್ಟು 47 ಶಂಕಿತರ ಮಾದರಿಗಳನ್ನು ಸಂಗ್ರಹಿಸಿಲಾಗಿದೆ. ಇದರಲ್ಲಿ 31 ನೆಗೆಟಿವ್‌ ಬಂದಿದ್ದು, ಉಳಿದವರ ವರದಿ ಬರಬೇಕು. ಜತೆಗೆ, ಪಾಸಿಟಿವ್‌ ಇರುವ ವ್ಯಕ್ತಿಗಳೊಂದಿಗೆ ನೇರ ಸಂಪರ್ಕಕ್ಕೆ ಬಂದವರ ಸಂಖ್ಯೆ 99ಕ್ಕೆ ಏರಿದೆ. ಆದರೆ, ಪರೋಕ್ಷ ಸಂಪರ್ಕಕ್ಕೆ ಬಂದವರ ಸಂಖ್ಯೆ ನಾಲ್ಕಂಕಿ ದಾಟಿದೆ. ಒಂದು ವೇಳೆ ಮಾರಿಯ ಪ್ರಭಾವ ಹೆಚ್ಚುತ್ತ ಸಾಗಿದರೆ ಈಗಿರುವ ಆಂಬುಲೆನ್ಸ್‌ಗಳು ಸಾಲುವುದಿಲ್ಲ ಎಂದೂ ಪರಿಣತರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಜಿಲ್ಲೆಯನ್ನು ಬಂದ್‌ ಮಾಡಿದ್ದರಿಂದ ಕಳೆದ 15 ದಿನಗಳಿಂದ ಅಪಘಾತ ಅಥವಾ ತುರ್ತು ಚಿಕಿತ್ಸೆಯಂಥ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಬಹಳಷ್ಟು ಆಂಬುಲೆನ್ಸ್‌ಗಳನ್ನು ಕೊರೊನಾ ಶಂಕಿತರನ್ನು ಕರೆತರುವುದಕ್ಕಾಗಿಯೇ ಮೀಸಲಿಡಲಾಗಿದೆ.

ಜತೆಗೆ, ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಕೊರತೆ ಎದುರಿಸುತ್ತಿಲ್ಲ ಎಂಬುದು ಸಮಾಧಾನಕರ ಸಂಗತಿ. ಇದರೊಂದಿಗೆ ಪ್ರತಿ ಆಂಬುಲೆನ್ಸ್‌ಗೂ ಒಬ್ಬ ಚಾಲಕ, ಒಬ್ಬ ತಜ್ಞವೈದ್ಯ, ಒಬ್ಬ ನರ್ಸ್‌ ಸೇರಿದಂತೆ ತಲಾ ಮೂವರು ಸಿಬ್ಬಂದಿಯನ್ನು ನೀಡಲಾಗಿದೆ.

ಖಾಸಗಿಯ ಆಸ್ಪತ್ರೆಗಳ ಬಳಿ 24 ಆಂಬುಲೆನ್ಸ್‌

ನಗರವೂ ಸೇರಿದಂತೆ ಜಿಲ್ಲೆಯಲ್ಲಿರುವ ಕೆಲವು ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ 24 ಆಂಬುಲೆನ್ಸ್‌ಗಳಿವೆ. ಕೊರೊನಾ ಶಂಕಿತರ ಸಂಖ್ಯೆ ಹೆಚ್ಚುತ್ತ ಸಾಗಿದರೆ; ಚಾಲಕರು ಹಾಗೂ ಸಿಬ್ಬಂದಿ ಸಮೇತವಾಗಿ ಖಾಸಗಿ ಆಂಬುಲೆನ್ಸ್‌ಗಳನ್ನೂ ಬಳಸಿಕೊಳ್ಳಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.