ADVERTISEMENT

ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ್ದು ತಪ್ಪು: ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 14:32 IST
Last Updated 23 ಜೂನ್ 2025, 14:32 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರಗಿ: ‘ಅಮೆರಿಕವು ಇರಾನ್ ಮೇಲೆ ದಾಳಿ ಮಾಡಿದ್ದು ತಪ್ಪು ನಿರ್ಧಾರ. ಜಗತ್ತಿನಲ್ಲಿ ಯಾವ ದೇಶಗಳ ಮಧ್ಯೆಯೂ ಯುದ್ಧ ಒಳ್ಳೆಯದಲ್ಲ. ಎಂಥದ್ದೇ ಸಮಸ್ಯೆ ಇರಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯುದ್ಧ ಮಾಡಿ ಎಲ್ಲಾ ನಾಶವಾದರೆ ಎಲ್ಲಿ ಬದುಕುತ್ತೀರಿ? ಈ ಹಿಂದಿನಿಂದಲೂ ನಮ್ಮ‌ ಜೊತೆ ಇರಾನ್ ಒಳ್ಳೆಯ ಸಂಬಂಧ ಹೊಂದಿದೆ. ಅಲ್ಲಿಂದ ತೈಲ ಆಮದು ಮಾಡಿಕೊಳ್ಳುತ್ತಿದ್ದೇವೆ. ಇಡೀ ವಿಶ್ವಕ್ಕೆ ಬುದ್ಧನ ಶಾಂತಿ ಬೇಕಾಗಿದೆಯೇ ಹೊರತು ಯುದ್ಧ ಬೇಕಾಗಿಲ್ಲ’ ಎಂದರು.

‘ಇಸ್ರೇಲ್–ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದ ವೇಳೆ ಇನ್ನೊಬ್ಬರು ಮಧ್ಯಪ್ರವೇಶ ಮಾಡುವುದು ಒಳ್ಳೆಯ ಸಂದೇಶ ಕೊಡುವುದಿಲ್ಲ’ ಎಂದು ಅವರು ಅಮೆರಿಕದ ನಡೆಯನ್ನು ಟೀಕಿಸಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರು ಭಾರತ–ಪಾಕಿಸ್ತಾನದ ಸಂಘರ್ಷದ ವೇಳೆ ಎಲ್ಲರೂ ಒಂದಾಗಿ ಅಂದಿದ್ದರು. ಕಾಶ್ಮೀರದಿಂದ  ಕನ್ಯಾಕುಮಾರಿಯವರೆಗೂ ಒಂದಾಗಿದ್ದೆವು‌. ಆದರೆ, ಮೋದಿಯವರೇ ಸರ್ವಪಕ್ಷ ಸಭೆಗೆ ಬರಲಿಲ್ಲ. ಇದು ಅವರ ಅಹಂಕಾರ ತೋರಿಸುತ್ತದೆ. ಎಲ್ಲರೂ ಒಂದಾಗಿರುವ ಸಂದೇಶ ಕೊಟ್ಟರೆ ಒಳ್ಳೆಯದು’ ಎಂದು ಹೇಳಿದರು.

‘ಮಹಾರಾಷ್ಟ್ರ ಚುನಾವಣೆಯ ಸಂದರ್ಭದಲ್ಲೇ ಅಲ್ಲಿ ಪಾರದರ್ಶಕತೆ ಇಲ್ಲದಿರುವುದನ್ನು ಹೇಳಿದ್ದೆ. ಅದನ್ನೇ ರಾಹುಲ್ ಗಾಂಧಿ ಅವರು ಪ್ರಶ್ನೆ ಮಾಡುತ್ತಿದ್ದಾರೆ’ ಎಂದು ‍‍ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರಾಜ್ಯದ ವಸತಿ ನಿಗಮದಿಂದ ಹಣ ಪಡೆದು ಮನೆಗಳನ್ನು ಹಂಚಿಕೆ ಮಾಡುತ್ತಿರುವ ಕುರಿತು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಖರ್ಗೆ ಅವರು, ಈ ಬಗ್ಗೆ ರಾಜ್ಯ ನಾಯಕರನ್ನೇ ಕೇಳಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.