ADVERTISEMENT

ಹಿಂದೂಗಳ ರಕ್ಷಣೆಗೆ ಮುಂದಾಗದಿದ್ದರೆ ಬಿಜೆಪಿಗೆ ತಕ್ಕಪಾಠ: ಸಿದ್ದಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 14:23 IST
Last Updated 27 ಫೆಬ್ರುವರಿ 2022, 14:23 IST
ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮಿ ಅವರು ಪಟ್ಟಣದ ಶಿವಾಜಿ ಪ್ರತಿಮೆಗೆ ಪುಷ್ಪಮಾಲೆ ಅರ್ಪಿಸಿದರು. ದಿವ್ಯಾ ಹಾಗರಗಿ, ವಿಠ್ಠಲ ನಾಯಕ ಇದ್ದರು
ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮಿ ಅವರು ಪಟ್ಟಣದ ಶಿವಾಜಿ ಪ್ರತಿಮೆಗೆ ಪುಷ್ಪಮಾಲೆ ಅರ್ಪಿಸಿದರು. ದಿವ್ಯಾ ಹಾಗರಗಿ, ವಿಠ್ಠಲ ನಾಯಕ ಇದ್ದರು   

ವಾಡಿ: ಹಿಂದುತ್ವದ ಹೆಸರು ಹೇಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಪಕ್ಷ ಹಿಂದೂ ಕಾರ್ಯಕರ್ತರ ರಕ್ಷಣೆ ವಿಷಯದಲ್ಲಿ ನಿರ್ಲಕ್ಷ ವಹಿಸುತ್ತಿದೆ. ನಿರ್ಲಕ್ಷ್ಯ ಮುಂದುವರೆದರೆ ಚುನಾವಣೆಯಲ್ಲಿ ಹಿಂದೂ ಸಂಘಟನೆಗಳು ಒಟ್ಟಾಗಿ ತಕ್ಕ ಪಾಠ ಕಲಿಸಲಿವೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮಿ ಎಚ್ಚರಿಸಿದರು.

ವಾಡಿ ಪಟ್ಟಣದ ರೆಷ್ಟ್ ಕ್ಯಾಂಪ್ ತಾಂಡಾದ ಶ್ರೀಸೇವಾಲಾಲ ಮಂದಿರದಲ್ಲಿ ಶನಿವಾರ ಶಿವಮಾಲ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಹಿಂದೂಗಳು ಬಿಜೆಪಿ ನಿರ್ಲಕ್ಷ್ಯ ಖಂಡಿಸಿ ನೋಟಾ ಬಟನ್ ಒತ್ತುವುದರ ಮೂಲಕ ಎಚ್ಚರಿಕೆ ಸಂದೇಶ ರವಾನಿಸಲಿದ್ದಾರೆ ಎಂದರು.

ಆಳಂದ ಪಟ್ಟಣದ ಭವಾನಿ ಮಂದಿರವನ್ನು ಮೊಗಲರು ಧ್ವಂಸ ಮಾಡಿ ಲಾಡ್ಲೇ ಮಶಾಕ್ ದರ್ಗಾ ನಿರ್ಮಿಸಿದ್ದಾರೆ. ಅಲ್ಲಿನ ರಾಘವ ಚೈತನ್ಯರ ಸಮಾಧಿ ಕಣ್ಮರೆ ಮಾಡಿದ್ದಾರೆ. ಶಿವಲಿಂಗಕ್ಕೆ ಅವಮಾನ ಮಾಡಲಾಗಿದೆ. ಮಾ.1 ಶಿವರಾತ್ರಿ ದಿನದಂದು ಜಿಲ್ಲೆಯ ಆಳಂದ ಪಟ್ಟಣದ ರಾಘವ ಚೈತನ್ಯ ದೇವಾಲಯದ ಶಿವಲಿಂಗವನ್ನು ಶಿವಮಾಲಾಧಾರಿ ಹಾಗೂ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಶುದ್ದೀಕರಣದ ನಿಮಿತ್ತ ಆಳಂದ ಚಲೋ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

ಶಿವಲಿಂಗ ಧ್ವಂಸ ಮಾಡಿರುವ ಮತಾಂಧರನ್ನು ರಾಜ್ಯ ಸರ್ಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಬಿಜೆಪಿಗೆ ಕೇವಲ ಚುನಾವಣೆಯಲ್ಲಿ ಮಾತ್ರ ಹಿಂದುತ್ವ ನೆನಪಾಗುತ್ತದೆ. ಹಿಂದೂಗಳ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬರುವ ಬಿಜೆಪಿ ಪಕ್ಷ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ತಡೆಯಲು ಮೊದಲ ಆದ್ಯತೆ ನೀಡುವ ತನ್ನ ಜವಾಬ್ದಾರಿ ಮರೆತಿದೆ ಎಂದು ಕಿಡಿಕಾರಿದ ಅವರು, ಹಿಂದೂ ದೇವಸ್ಥಾನ ಹಾಗೂ ಹಿಂದೂಗಳ ರಕ್ಷಣೆ ವಿಷಯದಲ್ಲಿ ನಿರ್ಲಕ್ಷ್ಯ ಮುಂದುವರೆದರೆ ಚುನಾವಣೆಯಲ್ಲಿ ಹಿಂದೂಗಳೆಲ್ಲರೂ ಒಂದಾಗಿ ನೋಟಾದ ಮೊರೆಹೋಗಿ ಬಿಜೆಪಿಯನ್ನು ಸೋಲಿಸಿ ಮನೆಗೆ ಕಳುಹಿಸಿಕೊಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ಶ್ರೀರಾಮ ಸೇನೆಯ ಅಧ್ಯಕ್ಷ ವಿನೋದ ಹಿಂದೂ, ಕಾರ್ಯದರ್ಶಿ ವಿಶ್ವ ತಳವಾರ, ಮುಖಂಡರಾದ ದಿವ್ಯಾ ಹಾಗರಗಿ, ಸಿದ್ದರಾಮಯ್ಯ ಹಿರೇಮಠ, ಸಂತೋಷ್ ಬೆನಕನಹಳ್ಳಿ, ರಾಜೇಶ ಹಾಗರಗಿ, ವಿಠ್ಠಲ ನಾಯಕ, ಅಣ್ಣಾರಾವ ಬಾಳಿ, ಈಶ್ವರ ಬಾಳಿ, ವೀರಣ್ಣ ಯಾರಿ, ಹರಿ ಗಲಾಂಡೆ, ಅಶೋಕ ಪವಾರ, ಜಗತಸಿಂಗ ರಾಠೋಡ, ದೌಲತರಾವ ಚಿತ್ತಾಪುರಕರ, ಶಿವಶಂಕರ ಕಾಶೆಟ್ಟಿ, ಲಕ್ಷ್ಮಣ ಮೆಂಗಜಿ, ಮಹಾಲಿಂಗ ಶೆಳ್ಳಗಿ, ಕಿಶನ ಜಾಧವ, ರವಿ ಜಾಧವ, ವಿಶ್ವನಾಥ ಹಡಪದ, ಸತೀಶ ಸಾವಳಗಿ, ರಾಹುಲ ಸಿಂದಗಿ, ಹೀರಾ ನಾಯಕ, ಅಂಬ್ರೇಷ್ ಕಡದರಾಳ, ದೇವಿಂದ್ರ ಬಡಿಗೇರ, ಅಂಬ್ರೇಷ್ ರಡ್ಡಿ, ಅರ್ಜುನ ದಹಿಯಾಂಡೆ, ಅಭಿಷೇಕ ರಾಠೋಡ, ಸಿದ್ದೇಶ್ವರ ಚೋಪಡೆ, ರಾಹುಲ ರಾಠೋಡ, ಸಚಿನ್ ಚವ್ಹಾಣ, ರಾಜು ಕೊಳಿ, ಬಾಬು ಕುಡಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.