ಕಲಬುರಗಿ: ಆಳಂದ ತಾಲ್ಲೂಕಿನ ನರೋಣಾ ಪೊಲೀಸ್ ಠಾಣೆ ವ್ಯಾಪ್ತಿಯ ಕಡಗಂಚಿ ಗ್ರಾಮದ ಹೆದ್ದಾರಿಯಲ್ಲಿ ದನಗಳ ಚರ್ಮವನ್ನು ಹೊತ್ತೊಯ್ಯುತ್ತಿದ್ದ ಮಹಾರಾಷ್ಟ್ರ ನೋಂದಣಿ ಹೊಂದಿದ ಲಾರಿ ಮೇಲೆ ದಾಳಿ ನಡೆಸಿದ ಪೊಲೀಸರು 9 ಟನ್‌ಗಿಂತ ಅಧಿಕ ಭಾರದ 1800ಕ್ಕೂ ಅಧಿಕ ದನಗಳ ಚರ್ಮವನ್ನು ಸೋಮವಾರ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಹುಣಚಿರಾಯ ಮೋಟಗಿ ಅವರು ಠಾಣೆಗೆ ದೂರು ನೀಡಿದ್ದರು. ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಪಕ್ಕದಲ್ಲಿ ಹಾದು ಹೋಗುತ್ತಿದ್ದ ಲಾರಿಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಇದರಿಂದ ಸಂಶಯಗೊಂಡ ಮೋಟಗಿ ಅವರು ಲಾರಿಯನ್ನು ತಡೆದು ಚಾಲಕನನ್ನು ವಿಚಾರಿಸಿದ್ದಾರೆ. ಆದರೆ, ಚಾಲಕ ಸರಿಯಾದ ಮಾಹಿತಿ ನೀಡಿಲ್ಲ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಲಾರಿ ಮಾಲೀಕ, ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿಯ ವಿರುದ್ಧ ಕರ್ನಾಟಕ ಪ್ರಾಣಿ ಹತ್ಯೆ ನಿಷೇಧ ಹಾಗೂ ಸಂರಕ್ಷಣೆ ಕಾಯ್ದೆ–2020ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.