ADVERTISEMENT

ಬಾಕಿ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ: ಅನಿರುದ್ಧ ಶ್ರವಣ್

ಕೆಕೆಆರ್‌ಡಿಬಿ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 10:25 IST
Last Updated 15 ನವೆಂಬರ್ 2022, 10:25 IST
ಅನಿರುದ್ಧ ಶ್ರವಣ್
ಅನಿರುದ್ಧ ಶ್ರವಣ್   

ಕಲಬುರಗಿ: ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಿಂದ ಕೈಗೆತ್ತಿಕೊಂಡಿರುವ ಹಳೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುತ್ತೇನೆ’ ಎಂದು ಮಂಡಳಿಯ ನೂತನ ಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ಅನಿರುದ್ಧ ಶ್ರವಣ್ ತಿಳಿಸಿದರು.

ಮಂಡಳಿ ಕಾರ್ಯದರ್ಶಿಯಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಮಂಡಳಿಯು ಬಹಳ ಮಹತ್ವದ ಸಂಸ್ಥೆಯಾಗಿದ್ದು, ಇದಕ್ಕಾಗಿ ವಾರ್ಷಿಕವಾಗಿ ₹ 3 ಸಾವಿರ ಕೋಟಿ ಅನುದಾನ ಬರುತ್ತಿದೆ. ಇರುವ ಸಿಬ್ಬಂದಿಯನ್ನು ಬಳಸಿಕೊಂಡು, ಬೇರೆ ಇಲಾಖೆಗಳ ಸಹಯೋಗದೊಂದಿಗೆ ಮಂಡಳಿಯ ಕಾಮಗಾರಿ ನಡೆಸುವುದು ನಿಜಕ್ಕೂ ಸವಾಲಿನ ಕೆಲಸ. ಆದರೆ, ಅಸಾಧ್ಯವೇನಲ್ಲ. ಈ ಬಗ್ಗೆ ಮಂಡಳಿ ವ್ಯಾಪ್ತಿಯ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ. ಮಂಡಳಿಯಲ್ಲಿ 83 ಹುದ್ದೆಗಳ ಪೈಕಿ 16 ಹುದ್ದೆಗಳು ಖಾಲಿ ಇದ್ದು, ಅವುಗಳ ನೇಮಕಾತಿಗೆ ಕ್ರಮ ಕೈಗೊಳ್ಳುತ್ತೇವೆ. ಹೆಚ್ಚಾಗಿ ತಾಂತ್ರಿಕ ಸಿಬ್ಬಂದಿಯ ಅಗತ್ಯವಿದೆ ಎಂದರು.

‘ಮಂಡಳಿಯ ಅನುದಾನವನ್ನು ಕಾಲಮಿತಿಯಲ್ಲಿ ಖರ್ಚು ಮಾಡುವ ಉದ್ದೇಶದಿಂದ ಹಾಗೂ ಗುಣಮಟ್ಟದ ಕಾಮಗಾರಿಯನ್ನು ನಡೆಸಲು ಖಾಸಗಿ ಮ್ಯಾನೇಜ್‌ಮೆಂಟ್ ಕನ್ಸಲ್ಟಂಟ್ ಸಂಸ್ಥೆಗಳ (ಪಿಎಂಸಿ) ಸೇವೆಯನ್ನು ಪಡೆಯುವ ಉದ್ದೇಶವಿದೆ. ಇದರಿಂದ ಆ ಸಂಸ್ಥೆಯ ನುರಿತ ಸಿಬ್ಬಂದಿಯ ಸೇವೆ ದೊರೆಯುತ್ತದೆ. ಕಾಲಮಿತಿಯಲ್ಲಿ ಕಾಮಗಾರಿಗಳೂ ಪೂರ್ಣಗೊಳ್ಳುತ್ತವೆ. ಪ್ರತಿ ಜಿಲ್ಲೆಗಳಲ್ಲಿ ಮಂಡಳಿಯಿಂದ ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗಗಳನ್ನು ಆರಂಭಿಸುವ ಪ್ರಸ್ತಾವಗಳಿವೆ. ಅವುಗಳ ಬಗ್ಗೆಯೂ ಅಧ್ಯಯನ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.

ADVERTISEMENT

‘ಕಲಬುರಗಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿ, ಬೀದರ್ ಹಾಗೂ ವಿಜಯನಗರ ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರಿಂದ ಈ ಜಿಲ್ಲೆಗಳ ಬಗ್ಗೆ ಮಾಹಿತಿ ಇದೆ. ರಾಯಚೂರು, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳ ಬಗ್ಗೆ ಮಾಹಿತಿ ಪಡೆಯಬೇಕಿದೆ. ಮಂಡಳಿಯಿಂದ ಏನೇನು ಕೆಲಸಗಳಾಗಬೇಕಿದೆಯೋ ಅವುಗಳನ್ನು ವಿಳಂಬ ಮಾಡದಂತೆ ನಿರ್ವಹಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡುತ್ತೇನೆ’ ಎಂದರು.

‘ಕಾಮಗಾರಿಗಳಿಗೆ ಅನುಮೋದನೆ, ಅನುಷ್ಠಾನವನ್ನು ನೋಡಿಕೊಳ್ಳಲು ಮಂಡಳಿಯು ನಿವೃತ್ತ ಎಂಜಿನಿಯರ್‌ಗಳ ಸೇವೆಯನ್ನು ಪಡೆಯುತ್ತಿದೆ. ನಿವೃತ್ತರ ಅನುಭವವು ಮಂಡಳಿಗೆ ಅನುಕೂಲವಾಗುತ್ತದೆ. ಆದರೆ, ಅವರಿಗೆ ತಾಂತ್ರಿಕವಾಗಿ ನೆರವಾಗಲು ಅಧೀನ ಸಿಬ್ಬಂದಿಗೆ ಇತ್ತೀಚಿನ ತಾಂತ್ರಿಕ ಬೆಳವಣಿಗೆಯ ಬಗ್ಗೆ ಮಾಹಿತಿ ಇರುವ ಯುವ ಸಿಬ್ಬಂದಿಯ ಅಗತ್ಯವಿದೆ. ಅದನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅನಿರುದ್ಧ ಶ್ರವಣ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.