ADVERTISEMENT

ಅನುಭವ ಮಂಟಪ ವಿಶ್ವದ ಎಲ್ಲ ಸಂಸತ್ತಿನ ತಾಯಿ: ನೀಲಾಂಬಿಕಾ ಪೊಲೀಸ್‌ಪಾಟೀಲ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 6:43 IST
Last Updated 4 ಆಗಸ್ಟ್ 2025, 6:43 IST
   

ಕಲಬುರಗಿ: ‘12ನೇ ಶತಮಾನದಲ್ಲಿ ಎಲ್ಲ‌ ಜಾತಿ, ವರ್ಗ ಮತ್ತು ಧರ್ಮದ ಶರಣರು ಸೇರುತ್ತಿದ್ದ ಅನುಭವ ಮಂಟಪವು ವಿಶ್ವದ ಎಲ್ಲಾ ದೇಶಗಳ ಸಂಸತ್ತುಗಳ ತಾಯಿಯಾಗಿದೆ’ ಎಂದು ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ನೀಲಾಂಬಿಕಾ ಪೊಲೀಸ್‌ಪಾಟೀಲ ಹೇಳಿದರು.

ಶರಣಬಸವೇಶ್ವರ ದೇವಸ್ಥಾನದ ಆವರಣದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಭಾನುವಾರ ಶ್ರಾವಣ ಮಾಸದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ‘ಬಸವಣ್ಣನವರು ಮತ್ತು ಅನುಭವ ಮಂಟಪ’ ಕುರಿತು ಅವರು ಮಾತನಾಡಿದರು.

‘ಮ್ಯಾಥ್ಯೂ ಅರ್ನಾಲ್ಡ್ ಹೇಳುವಂತೆ ವಿಶ್ವದ ಪ್ರಥಮ ಸಂಸತ್ತು ಅನುಭವ ಮಂಟಪ, ಬಸವಣ್ಣನವರು ಪ್ರಥಮ ವಿಚಾರವಾದಿ ಎನ್ನುವ ಅವರ ಮಾತು ಸತ್ಯವಾಗಿದೆ. ಬಸವಣ್ಣನವರು ಐತಿಹಾಸಿಕ ಮಹಾಪುರುಷರು. ಅವರು ಮಾಡಿದ ಎಲ್ಲ ಕಾರ್ಯಗಳು ಐತಿಹಾಸಿಕ ಸತ್ಯಗಳಾಗಿವೆ’ ಎಂದರು.

ADVERTISEMENT

‘ಅನುಭವ ಮಂಟಪ, ಮಹಾಮನೆ, ಪರುಷಕಟ್ಟೆ ಇವು ಬಸವಣ್ಣನವರು ಅಂದು ಕಲ್ಯಾಣದಲ್ಲಿ ಸ್ಥಾಪಿಸಿದ ಐತಿಹಾಸಿಕ ನೆಲೆಗಳು. ಇವು ಮೂರು ಗುರು-ಲಿಂಗ-ಜಂಗಮದ ಸ್ವರೂಪಗಳಾಗಿವೆ. ಅನುಭವ ಮಂಟಪ ಗುರುವಾಗಿ ಅಜ್ಞಾನ ಅಳಿಸಿ ಸುಜ್ಞಾನ ಕೊಟ್ಟರೆ, ಮಹಾಮನೆ ಲಿಂಗವಾಗಿ ಸಮಾನತೆ ತತ್ವ ಎತ್ತಿ ಹಿಡಿದು ಇಷ್ಟಲಿಂಗ, ಪ್ರಸಾದದ ಮಹತ್ವ ತೋರಿಸಿಕೊಟ್ಟಿತು. ಪುರುಷಕಟ್ಟೆ ಜಂಗಮವಾಗಿ ನಿರ್ಗತಿಕರ, ಬಡವರ ದುಃಖ ದುಮ್ಮಾನ ಅಳಿಸಿ ಅವರನ್ನು ಕಾಯಕಧಾರಿಗಳಾಗಿಸಿ ಅವರಲ್ಲಿ ನಾಡಪ್ರೇಮ ಹೆಚ್ಚಿಸಿತು. ಮಾನವನೊಳಗಿನ ಎಲ್ಲ ಮದಗಳನ್ನು ಅಳಿಸಿ ಅರಿವನ್ನು ಕೊಟ್ಟು ಅವರನ್ನು ಮಹಾಂತರನ್ನಾಗಿ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ’ ಎಂದರು.

‘ಅನುಭವ ಮಂಟಪದ ಕರ್ತೃ ಬಸವಣ್ಣನವರು. ಅವರಿಗೆ ಜನರೊಳಗಿನ ಭಯ, ಕೀಳರಿಮೆ ಭಾವನೆಗಳನ್ನು ಕಿತ್ತೊಗೆದು ಅವರಿಗೆ ವಿಚಾರ ಮಾಡುವ, ಮಾತನಾಡುವ, ಬರೆಯುವ ಸ್ವಾತಂತ್ರ್ಯ ಕಲ್ಪಿಸಬೇಕಾಗಿತ್ತು. ಅರಿವು ಒದಗಿಸುವ ಮಹಾದಾಶೆಯಿತ್ತು. ಹೀಗಾಗಿ ಅನುಭವ ಮಂಟಪ ಸ್ಥಾಪಿಸಿದರು. ನೀಲಾಂಬಿಕೆ ತನ್ನೊಂದು ವಚನದಲ್ಲಿ ‘ಚೆನ್ನಬಸವಣ್ಣನೆಂಬ ಪ್ರಸಾದಿ ಪಡೆದು ಅನುಭವ ಮಂಟಪವನ್ನು ಕಟ್ಟಿ ಅನುಭವ ಮೂರ್ತಿಯಾದನು ನಮ್ಮ ಬಸವಯ್ಯನು’ ಎಂದು ಹೇಳುತ್ತಾರೆ. ಈ ಮಾತಿಗೆ ಅನೇಕ ಜನಪದ ನುಡಿಗಳು ಸಾಕ್ಷಿಗಳಿವೆ’ ಎಂದರು.

‘ಅನುಭವ ಮಂಟಪದ ಘೋಷ ವಾಕ್ಯ ‘ಅರಿವೇ ಗುರು’. ಇದರ ಮುಖ್ಯ ತತ್ವಗಳು ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದವಾಗಿದೆ. ಇದರ ಮುಖ್ಯ ಗುರಿಗಳು ಭಕ್ತಿ, ಶಕ್ತಿ ಮತ್ತು ಮುಕ್ತಿ. ಕನ್ನಡ ಭಾಷೆಗೆ ಅಮರತ್ವವ ತಂದು ಕೊಟ್ಟು ಅನುಭವ ಮಂಟಪದ ಫಲಶ್ರುತಿ. ಕನ್ನಡ ಸಾಹಿತ್ಯದ ಹಿರಿಮೆ ಗರಿಮೆ ಜಗತ್ತಿಗೆ ಎತ್ತಿತೋರಿಸಿತು. ಈ ಅನುಭವ ಮಂಟಪದ ಮೂಲಕ ಅರಿವು ಸಂಪಾದಿಸಿ ಆಚಾರವನ್ನು ಅಂಗಗೊಳಿಸಿ 770 ಅಮರಗಣಂಗಳನ್ನು ಅನುಭವ ಮೂರ್ತಿಗಳನ್ನಾಗಿ ಮಾಡಿದವರು ಬಸವಣ್ಣ. ಹೀಗಾಗಿ ಅನುಭವ ಮಂಟಪ ಇಡೀ ವಿಶ್ವ ಗುರುವಿನ ಸ್ಥಾನದಲ್ಲಿ ನಿಂತು ಅದರ ಸಂಸ್ಥಾಪಕ ಬಸವಣ್ಣನವರು ವಿಶ್ವಗುರು ಎನಿಸಿಕೊಳ್ಳುತ್ತಾರೆ’ ಎಂದರು.

ನಂತರ ಸಂಚಾಲಕ ಶಿವರಾಜಶಾಸ್ತ್ರಿ ಹೇರೂರ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.