ADVERTISEMENT

ಮಲ್ಲಾಬಾದ್‌ ಏತ ನೀರಾವರಿ; ₹359.67 ಕೋಟಿ ಮೊತ್ತದ ಟೆಂಡರ್‌ಗೆ ಅನುಮೋದನೆ

ಕೆಬಿಜೆಎನ್‌ಎಲ್‌ ನಿರ್ದೇಶಕರ ಮಂಡಳಿ ಸಭೆ ನಿರ್ಣಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 16:11 IST
Last Updated 22 ಜನವರಿ 2025, 16:11 IST
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಲ್ಲಾಬಾದ್ ಏತ ನೀರಾವರಿ ಯೋಜನೆ ಬಗ್ಗೆ ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಮಾಹಿತಿ ನೀಡಿದರು 
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಲ್ಲಾಬಾದ್ ಏತ ನೀರಾವರಿ ಯೋಜನೆ ಬಗ್ಗೆ ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಮಾಹಿತಿ ನೀಡಿದರು    

ಕಲಬುರಗಿ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅಡಿ ಬರುವ ಜೇವರ್ಗಿ ತಾಲ್ಲೂಕಿನ ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಬಾಕಿ ಕಾಮಗಾರಿಗಳ ಅನುಷ್ಠಾನಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮದಿಂದ ಹಸಿರು ನಿಶಾನೆ ದೊರೆತಿದೆ.

ಬುಧವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಕೆಬಿಜೆಎನ್‌ಎಲ್‌ ನಿರ್ದೇಶಕರ ಮಂಡಳಿಯ 142ನೇ ಸಭೆಯಲ್ಲಿ ಮಲ್ಲಾಬಾದ್‌ ಏತ ನೀರಾವರಿ ಯೋಜನೆಯ ಪ್ರಸ್ತಾವ ಚರ್ಚೆಯಾಗಿ ಅಂಗೀಕಾರವಾಗಿದೆ.

ಯೋಜನೆಯ 1, 2 ಮತ್ತು 3ನೇ ಹಂತದ ಬಾಕಿ ಉಳಿದಿರುವ ವಿತರಣಾ ಕಾಲುವೆ ಕಾಮಗಾರಿಗಳ ಅನುಷ್ಠಾನಕ್ಕೆ ₹359.67 ಕೋಟಿ ಮೊತ್ತದ ಕಾಮಗಾರಿಗಳ ಟೆಂಡರ್‌ ಕರೆಯಲು ಸಭೆಯಲ್ಲಿ ಅನುಮೋದನೆ ದೊರಕಿದೆ. ಶೀಘ್ರದಲ್ಲೇ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ.

ADVERTISEMENT

ಮಲ್ಲಾಬಾದ್‌ ಏತ ನೀರಾವರಿ ಯೋಜನೆಯಡಿಯಲ್ಲಿ ಜೇವರ್ಗಿ ಮತ್ತು ಶಹಾಪುರ ತಾಲ್ಲೂಕಿನ 68 ಹಳ್ಳಿಗಳ 33,860 ಹೆಕ್ಟರ್‌ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಈ ಯೋಜನೆಯಲ್ಲಿ ಲಿಫ್ಟ್‌ 1, 2 ಮತ್ತು 3ರ ಮುಖ್ಯ ಕಾಲುವೆ ಕಾಮಗಾರಿ ಪೂರ್ಣಗೊಂಡು ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ.

ಲಿಫ್ಟ್‌ 1ರ ವಿತರಣಾ ಕಾಲುವೆ 1 ರಿಂದ 5ರ ವರೆಗಿನ 7,144 ಹೆಕ್ಟರ್‌ಗೆ ನೀರಾವರಿ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಬಾಕಿ ಉಳಿದ 26,716 ಹೆಕ್ಟರ್‌ ಪ್ರದೇಶಕ್ಕೆ ಕಾಲುವೆ ಕೊನೆಯವರೆಗೂ ಸಮಗ್ರವಾಗಿ ನೀರುಣಿಸಲು 3 ಪ್ಯಾಕೇಜ್‌ ಕಾಮಗಾರಿ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಅದೇ ಪ್ರಸ್ತಾವಕ್ಕೆ ಸಿ.ಎಂ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ನೇತೃತ್ವದ ಕೆಬಿಜೆಎನ್‌ಎಲ್‌ ನಿರ್ದೇಶಕರ ಮಂಡಳಿ ಸಭೆ ಅನುಮೋದನೆ ನೀಡಿದೆ.

‘ಮಲ್ಲಾಬಾದ್‌ ಏತ ನೀರಾವರಿ ಯೋಜನೆ ₹359. 67 ಕೋಟಿ ಮೊತ್ತದ ಕಾಮಗಾರಿಗಳ ಟೆಂಡರ್‌ಗೆ ಅನುಮೋದನೆ ದೊರಕಿದ್ದು ಯೋಜನೆಯ ಅನುಷ್ಠಾನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಶೀಘ್ರ ಟೆಂಡರ್‌ ಪ್ರಕ್ರಿಯೆ ನಡೆದು ಕಾಮಗಾರಿಗಳು ಆರಂಭವಾಗಲಿವೆ. ಇದರಿಂದ ಜೇವರ್ಗಿ, ಯಡ್ರಾಮಿ ಹಾಗೂ ಶಹಾಪುರ ತಾಲ್ಲೂಕಿನ ರೈತರಿಗೆ ಅನುಕೂಲವಾಗಲಿದೆ. ‌ಯೋಜನೆ ಪೂರ್ಣಗೊಳಿಸಿ 33,860 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ನಾನೂ ಅಷ್ಟೇ ಗಂಭೀರವಾಗಿ ಈ ಬಗ್ಗೆ ಕೆಲಸ ಮಾಡುತ್ತಿದ್ದೇನೆ’ ಎಂದು ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್‌ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.