ADVERTISEMENT

ಕಲಬುರಗಿ | ₹10 ಸಾವಿರ ಗೌರವಧನ ಆದೇಶ ಹೊರಡಿಸಲು ಆಗ್ರಹ: ಪ್ರತಿಭಟನೆ

ಸುಡು ಬಿಸಿಲಿನಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 14:01 IST
Last Updated 18 ಮಾರ್ಚ್ 2025, 14:01 IST
ಕಲಬುರಗಿಯಲ್ಲಿ ಮಂಗಳವಾರ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿಯ ಮುಖಂಡರು, ಸದಸ್ಯರು ಪ್ರತಿಭಟನೆ ನಡೆಸಿದರು
ಕಲಬುರಗಿಯಲ್ಲಿ ಮಂಗಳವಾರ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿಯ ಮುಖಂಡರು, ಸದಸ್ಯರು ಪ್ರತಿಭಟನೆ ನಡೆಸಿದರು   

ಕಲಬುರಗಿ: ಆಶಾ ಕಾರ್ಯಕರ್ತೆಯರಿಗೆ ಏಪ್ರಿಲ್ 1ರಿಂದ ಅನ್ವಯ ಆಗುವಂತೆ ಪ್ರೋತ್ಸಾಹಧನ ಸೇರಿಸಿ ಮಾಸಿಕ ಕನಿಷ್ಠ ₹ 10 ಸಾವಿರ ಗೌರವಧನವನ್ನು ಪಾವತಿಸುವ ಆದೇಶವನ್ನು ಹೊರಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯ ಮುಖಂಡರು ಹಾಗೂ ಸದಸ್ಯರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸುಡು ಬಿಸಿಲಿನಲ್ಲಿ ಜಮಾಯಿಸಿದ ನೂರಾರು ಆಶಾ ಕಾರ್ಯಕರ್ತೆಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

₹ 15 ಸಾವಿರ ನಿಶ್ಚಿತ ಗೌರವಧನ ಏರಿಕೆಗಾಗಿ ಬೆಂಗಳೂರಿನಲ್ಲಿ ಜನವರಿ ತಿಂಗಳಲ್ಲಿ ಪ್ರತಿಭಟನೆ ನಡೆಸಿದ ವೇಳೆ ಆರೋಗ್ಯ ಸಚಿವರು, ಉನ್ನತ ಅಧಿಕಾರಿಗಳೊಂದಿಗೆ ಸೇರಿ ಸಭೆ ನಡೆಸಿ ಗೌರವಧನ ಏರಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.

ADVERTISEMENT

ಬಜೆಟ್‌ನಲ್ಲಿ ಸುಮಾರು 2.50 ಲಕ್ಷ ಅಂಗನವಾಡಿ– ಬಿಸಿಯೂಟ ಕಾರ್ಯಕರ್ತೆಯರಿಗೆ ₹ 1,000 ಹೆಚ್ಚಿಸಿದಂತೆ 42 ಸಾವಿರ ಆಶಾ ಕಾರ್ಯಕರ್ತೆಯರಿಗೂ ₹ 1,000 ಹೆಚ್ಚಿಸಿ, ಇದೇ ಬಜೆಟ್‌ನಲ್ಲಿ ಸೇರಿಸಿ ಆದೇಶಿಸಬೇಕು. ಈ ಮೂಲಕ ಆಶಾ ಕಾರ್ಯಕರ್ತೆಯರ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದರು.

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಠ ₹ 10 ಸಾವಿರ ಗೌರವಧನ ಕೊಡುವುದಾಗಿ ರಾಜ್ಯ ಸರ್ಕಾರವು ಆಶ್ವಾಸನೆ ಕೊಟ್ಟಿತ್ತು. ₹ 10 ಸಾವಿರ ಹೊರತುಪಡಿಸಿ ಕಾಂಪೋನೆಂಟ್ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಭತ್ಯೆ (ಇನ್ಸೆಂಟಿವ್) ಕೂಡ ನೀಡಲಾಗುವುದು ಎಂದಿತ್ತು. ಒಂದು ವೇಳೆ ಯಾರಿಗಾದರೂ ಕಾಂಪೋನೆಂಟ್‌ ಕಡಿಮೆ ಮೊತ್ತದ ಪ್ರೋತ್ಸಾಹಧನ ಬಂದಿದ್ದಲ್ಲಿ ಅಂತಹ ಕಾರ್ಯಕರ್ತೆಯರಿಗೆ ಸರ್ಕಾರವೇ ವ್ಯತ್ಯಾಸದ ಹಣ ಪಾವತಿಸಿ, ₹ 10 ಸಾವಿರ ಗ್ಯಾರಂಟಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವಾಗ್ದಾನ ನೀಡಿತ್ತು. ಕೂಡಲೇ ಈ ಭರವಸೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಗೌರವ ಅಧ್ಯಕ್ಷ ವಿ.ಜಿ. ದೇಸಾಯಿ, ಜಿಲ್ಲಾ ಅಧ್ಯಕ್ಷೆ ಶಿವಲಿಂಗಮ್ಮ ನಂದೂರ, ಕಾರ್ಯದರ್ಶಿ ಗೀತಾ ಮಳ್ಳಿ ಸೇರಿ ನೂರಾರು ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.