ADVERTISEMENT

ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳಕ್ಕೆ ಸಿ.ಎಂ.ಗೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 5:23 IST
Last Updated 18 ಸೆಪ್ಟೆಂಬರ್ 2020, 5:23 IST
ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಬೇಕು. ಬಾಕಿ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು
ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಬೇಕು. ಬಾಕಿ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು   

ಕಲಬುರ್ಗಿ: ಕೊರೊನಾ ಸಂದರ್ಭದಲ್ಲಿ ಅಹರ್ನಿಶಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳ ಮಾಡಬೇಕು. ಪ್ರೋತ್ಸಾಹ ಧನ ಹಾಗೂ ಬಾಕಿ ವೇತನ ಪಾವತಿ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಗುರುವಾರ ನಗರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಕೊರೊನಾ ವಾರಿಯರ್ಸ್ ಎಂದೇ ಹೆಸರಾದ ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರು ಎರಡು ತಿಂಗಳ ಹಿಂದೆ 20 ದಿನಗಳ ನಿರಂತರ ಹೋರಾಟ ಮಾಡಿದ್ದುದು ತಮಗೆ ತಿಳಿದಿದೆ. ತಾವು ಆ ಸಂದರ್ಭದಲ್ಲಿ ‘ಸರ್ಕಾರವು ಆಶಾ ಕಾರ್ಯಕರ್ತೆಯರ ಜೊತೆ ಇದೆ, ನಿಮ್ಮ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಸಿದ್ಧವಿದೆಯೆಂದು, ಕೂಡಲೇ ವೇತನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದೀರಿ. ತಮ್ಮ ಭರವಸೆಗೆ ಓಗೊಟ್ಟು ಆಶಾ ಕಾರ್ಯಕರ್ತೆಯರು ಮುಷ್ಕರವನ್ನು ತಕ್ಷಣವೇ ಹಿಂತೆಗೆದುಕೊಂಡಿದ್ದಾರೆ. ಹೀಗಾಗಿ, ಭರವಸೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕರ್ತೆಯರ ಚಟುವಟಿಕೆಗಳನ್ನು ಆನ್‌ಲೂನ್ ಪೋರ್ಟಲ್‍ನಲ್ಲಿ ದಾಖಲಿಸಲು ಇರುವ ಅಸಂಖ್ಯಾತ ಲೋಪದೋಷಗಳನ್ನು ಸರಿಪಡಿಸುವ ಹೆಸರಿನಲ್ಲಿ ಕಾಲ ವಿಳಂಬ ನೀತಿಯಿಂದಾಗಿ 2018–19ರ ನಡುವೆ 15 ತಿಂಗಳುಗಳಲ್ಲಿ ಪ್ರತಿ ಕಾರ್ಯಕರ್ತೆಗೆ ಬರಬೇಕಾಗಿದ್ದ ₹ 15ರಿಂದ 25 ಸಾವಿರದಷ್ಟು ಹಣ ಬರದೇ ನಷ್ಟವಾಯಿತು. ಈಗಲೂ ಕೆಲಸಕ್ಕೆ ತಕ್ಕಷ್ಟು ಹಣ ಅವರಿಗೆ ಸಿಗುತ್ತಿಲ್ಲ. ಆದರೆ ದಿನೇ ದಿನೇ ದುಡಿತ ಹೆಚ್ಚಿತೇ ಹೊರತು ದುಡಿದ ಹಣ ಮಾತ್ರ ಕೈಗೆ ಬರಲಿಲ್ಲ. ಇದರಿಂದ ಮುಂದುವರಿದ ಈ ಅನ್ಯಾಯದಿಂದ ಕಾರ್ಯಕರ್ತೆಯರ ಕುಟುಂಬಗಳು ತೀವ್ರ ಆರ್ಥಿಕ ತೊಂದರೆಗಳನ್ನು ಎದುರಿಸುವಂತಾಗಿದೆ. ಹಲವು ತಿಂಗಳುಗಳಿಂದ ಕೋವಿಡ್ ಕೆಲಸದಲ್ಲಿ ನಿಷ್ಠೆಯಿಂದ ತೊಡಗಿರುವುದು ತಮಗೆ ತಿಳಿದ ವಿಷಯವಾಗಿದೆ. ಆದರೆ ಆಶಾಕಾರ್ಯಕರ್ತೆಯರಿಗೆ ದುಡಿಮೆಗೆ ತಕ್ಕ ವೇತನ ಮಾತ್ರ ಸಿಗುತ್ತಿಲ್ಲ ಎಂದರು.

ADVERTISEMENT

ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹ 12 ಸಾವಿರ ಘೋಷಿಸಬೇಕು. ಬಾಕಿ ಇರುವ ಜುಲೈ ತಿಂಗಳ ಸಂಬಳವನ್ನು ಬಿಡುಗಡೆ ಮಾಡಬೇಕು. ಕೊರೋನಾ ವಾರಿಯರ್ಸ್ ಆಶಾಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ಈಗಾಗಲೇ ಘೋಷಿಸಿದ ₹ 3 ಸಾವಿರ ಕೋವಿಡ್ ಪ್ರೋತ್ಸಾಹ ಧನವನ್ನು ಇನ್ನೂ ತಲುಪದಿರುವ ಆಶಾಗಳಿಗೆ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ನಿಯೋಗದಲ್ಲಿ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಜಿ.ದೇಸಾಯಿ, ಸಂಘಟನಾಕಾರರಾದ ಶಿವಲಿಂಗಮ್ಮ ನಂದೂರ, ಜಯಶ್ರೀ, ಗಾಯತ್ರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.