ADVERTISEMENT

ಸಾರಿಗೆ ನೌಕರರ ಮುಷ್ಕರದ ವೇಳೆ ಹಲ್ಲೆ: 9 ಸಿಬ್ಬಂದಿ ಅಮಾನತು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 14:48 IST
Last Updated 18 ಡಿಸೆಂಬರ್ 2020, 14:48 IST

ಕಲಬುರ್ಗಿ: ಇತ್ತೀಚೆಗೆ ನಡೆದ ಸಾರಿಗೆ ಸಿಬ್ಬಂದಿ ಮುಷ್ಕರದ ಸಂದರ್ಭದಲ್ಲಿ ಕರ್ತವ್ಯ ನಿರತ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ, ಬಸ್‌ಗಳನ್ನು ಜಖಂಗೊಳಿಸಿದ ಆರೋಪದ ಮೇರೆಗೆ 9 ಸಿಬ್ಬಂದಿಯನ್ನು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ. ಕೂರ್ಮರಾವ್ ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಸಂಸ್ಥೆಯ ಬೀದರ್‌ ವಿಭಾಗದ ಐವರು, ಕೊಪ್ಪಳ ವಿಭಾಗದ ಇಬ್ಬರು, ಬಳ್ಳಾರಿ ಹಾಗೂ ವಿಜಯಪುರ ವಿಭಾಗದ ತಲಾ ಒಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಕೂರ್ಮರಾವ್ ತಿಳಿಸಿದ್ದಾರೆ.

‘ಮುಷ್ಕರದಲ್ಲಿ ಭಾಗವಹಿಸಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಅಮಾನತಾದ ಕೆಲ ಸಿಬ್ಬಂದಿ ಮೇಲೆ ಎಫ್‌ಐಆರ್‌ ಸಹ ದಾಖಲಾಗಿದೆ. ಹಾಗಾಗಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಮುಷ್ಕರ ನಡೆದ ನಾಲ್ಕು ದಿನಗಳ ವೇತನವನ್ನು ಕಡಿತ ಮಾಡುವ ಬಗ್ಗೆ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ. ಈ ತೀರ್ಮಾನವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿದ ಬಳಿಕ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಅಧಿಕಾರಿಗಳು ಸಿಬ್ಬಂದಿ ಮೇಲೆ ನಡೆಸುತ್ತಿರುವ ಶೋಷಣೆಯನ್ನು ತಡೆಗಟ್ಟಬೇಕು ಎಂಬುದು ಸೇರಿದಂತೆ 10 ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನೌಕರರು ಇತ್ತೀಚೆಗೆ ಬಸ್‌ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.