
ಕಲಬುರಗಿ: ದಕ್ಷಿಣ ಕನ್ನಡ ಜಿಲ್ಲೆಯ ತಂಡವು ಶುಕ್ರವಾರ ಇಲ್ಲಿ ಮುಕ್ತಾಯಗೊಂಡ ಕರ್ನಾಟಕ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಅಥ್ಲೆಟಿಕ್ಸ್ ಕೂಟದಲ್ಲಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಅಮೋಘ ಪ್ರದರ್ಶನ ತೋರಿದ ತಂಡವು ಕೂಟದಲ್ಲಿ ಒಟ್ಟು 36 ಅಂಕಗಳನ್ನು ಕಲೆಹಾಕಿತು.
ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಲಬುರಗಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕ ಸುರೇಶ ಅಕ್ಕಣ್ಣ ಅವರು ವೈಯಕ್ತಿಕ ಹಾಗೂ ಸಮಗ್ರ ಚಾಂಪಿಯನ್‌ಶಿಪ್ ಟ್ರೋಫಿಯನ್ನು ವಿತರಿಸಿದರು.
4X100 ರಿಲೇ: ಬೆಂಗಳೂರು ದಕ್ಷಿಣ ತಂಡ (42.77 ಸೆಕೆಂಡುಗಳಲ್ಲಿ) ಪ್ರಥಮ ಸ್ಥಾನ ಗಳಿಸಿದರೆ, ದಕ್ಷಿಣ ಕನ್ನಡ ತಂಡವು (43.05 ಸೆ.) ದ್ವಿತೀಯ ಹಾಗೂ ಬೆಂಗಳೂರು ಉತ್ತರ ತಂಡವು (44.00 ಸೆ.) ತೃತೀಯ ಸ್ಥಾನ ಗಳಿಸಿತು.
4X400 ರಿಲೇ: ಬೆಂಗಳೂರು ದಕ್ಷಿಣ ತಂಡವು (3.26 ನಿಮಿಷಗಳಲ್ಲಿ) ಪ್ರಥಮ ಸ್ಥಾನ ಗಳಿಸಿದರೆ, ಉಡುಪಿ ತಂಡವು(3.26 ನಿ) ದ್ವಿತೀಯ ಹಾಗೂ ದಕ್ಷಿಣ ಕನ್ನಡ ತಂಡವು (3.30 ನಿ) ತೃತೀಯ ಸ್ಥಾನ ಗಳಿಸಿತು.
ಕ್ರಾಸ್‌ಕಂಟ್ರಿ: ಬೆಳಗಾವಿಯ ದಕ್ಷ ದೀಪಕ ಪಾಟೀಲ (19.34 ನಿಮಿಷ), ಮಹೇಶ ಮಲ್ಲಪ್ಪ(19.38 ನಿಮಿಷ) ಹಾಗೂ ಪ್ರವೀಣ ಅರ್ಜುನ್ (19.39 ನಿಮಿಷ), ಶಿವಾನಂದ ಸಿದರಾಯ ಮುಂಜೆ (19.47 ನಿಮಿಷ), ಅಬೂಬಕರ ಕಬಾಡಿ (20.03 ನಿಮಿಷ) ಅವರು ಅಗ್ರ ಐದು ಸ್ಥಾನಗಳನ್ನು ಗಳಿಸಿದರು.
ಹ್ಯಾಮರ್ ಥ್ರೋ: ದಕ್ಷಿಣ ಕನ್ನಡದ ಇಶಾನ್ ಕಾರ್ಯಪ್ಪ, 61.31 ಮೀ ಎಸೆದು ಪ್ರಥಮ ಸ್ಥಾನ ಗಳಿಸಿದರೆ, ಚಿಕ್ಕಮಗಳೂರು ಜಿಲ್ಲೆಯ ಸಲೀಂ 60.37 ಮೀ. ದೂರ ಎಸೆಯುವ ಮೂಲಕ ದ್ವಿತೀಯ ಸ್ಥಾನ ಗಳಿಸಿದರು.
ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ನಿರ್ದೇಶಕರ ಕಚೇರಿ ಬೆಂಗಳೂರು ಹಾಗೂ ಉಪನಿರ್ದೇಶಕರ ಕಚೇರಿ ಕಲಬುರಗಿ ಆಶ್ರಯದಲ್ಲಿ ಅಥ್ಲೆಟಿಕ್ಸ್ ಕೂಟವನ್ನು ಆಯೋಜಿಸಲಾಗಿತ್ತು. ಕೂಟದಲ್ಲಿ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಿದ ತರಬೇತುದಾರರನ್ನು ಸನ್ಮಾನಿಸಿ ಗೌರವಿಸಲಾಯಿತು.
ತರಬೇತುದಾರರಾದ ರೋಹಿಣಿ, ರಾಜು ಚೌಹಾಣ್, ಪ್ರವೀಣ ಪುಣೆ, ಸಂಜಯ ಬಾಣಾದ, ಶಿವಕುಮಾರ ಸಜ್ಜನ, ಭೀಮಾಶಂಕರ ಮಠಪತಿ, ಶಾಹೀದ್, ಅವಿನಾಶ, ರಮೇಶ ಪಾಟೀಲ ಹಾಜರಿದ್ದರು. ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಹಾಗೂ ಉಪನ್ಯಾಸಕರ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಪತ್ರಕರ್ತ ಬೀಮಾಶಂಕರ ಫಿರೋಜಾಬಾದ್, ಬಿ.ಎಚ್.ನೀರಗುಡಿ, ರಾಜು ಕೆ., ದೈಹಿಕ ಶಿಕ್ಷಣ ಉಪನ್ಯಾಸಕರು ಹಾಜರಿದ್ದರು.
ನಿತಿನ್ ಗೌಡ ವೈಯಕ್ತಿಕ ಚಾಂಪಿಯನ್
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿತಿನ್‌ಗೌಡ ಎಂ. ಅವರು ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಬಾಚಿಕೊಂಡರು. ಕೂಟದಲ್ಲಿ ಒಟ್ಟು 10 ಅಂಕಗಳನ್ನು ಕಲೆಹಾಕಿದರು. 400 ಮೀ. ಹರ್ಡಲ್ಸ್ ಹಾಗೂ 400 ಮೀ. ಓಟದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ವೈಯಕ್ತಿಕ ಚಾಂಪಿಯನ್ ಪಟ್ಟಕ್ಕೇರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.