ADVERTISEMENT

ಸರ್ಕಾರ ಬೀಳಿಸುವ ಯತ್ನ ನಡೆದಿದೆ: ಮಲ್ಲಿಕಾರ್ಜುನ ಖರ್ಗೆ

ಭೇದಭಾವ ಬಿಟ್ಟು ಒಗ್ಗಟ್ಟಿನಿಂದ ಇರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 20:04 IST
Last Updated 16 ಏಪ್ರಿಲ್ 2025, 20:04 IST
ಕಲಬುರಗಿಯ ಕೆಸಿಟಿ‌‌ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ವಿಭಾಗ ಮಟ್ಟದ ಉದ್ಯೋಗ ಮೇಳದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು.  ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಕಲಬುರಗಿಯ ಕೆಸಿಟಿ‌‌ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ವಿಭಾಗ ಮಟ್ಟದ ಉದ್ಯೋಗ ಮೇಳದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು.  ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಕಲಬುರಗಿ: ‘ಕರ್ನಾಟಕದಲ್ಲೂ ಕಾಂಗ್ರೆಸ್‌ ಸರ್ಕಾರ ಬೀಳಿಸುವ ಪ್ರಯತ್ನ ನಡೆಯುತ್ತಿದೆ. ನಿಮ್ಮಲ್ಲಿ ಏನೇ ಭೇದಭಾವ ಇದ್ದರೂ ಒಂದಾಗಿ ಇರಬೇಕು. ಇಲ್ಲದಿದ್ದರೆ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರು ಬಡ ಜನರನ್ನು ನುಂಗುತ್ತಾರೆ’ ಎಂದು ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ನಾಯಕರಿಗೆ ಕಿವಿಮಾತು ಹೇಳಿದರು.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಲಬುರಗಿ ವಿಭಾಗ ಮಟ್ಟದ ಉದ್ಯೋಗ ಮೇಳದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಎಲ್ಲೆಲ್ಲಿ ಕಾಂಗ್ರೆಸ್‌ ಸರ್ಕಾರ ಇದೆಯೋ ಅಲ್ಲಿ ಕೇಂದ್ರ ಸರ್ಕಾರ ಇ.ಡಿ, ಸಿಬಿಐ, ಸಿವಿಸಿ, ಐಟಿ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್‌ ಸರ್ಕಾರವನ್ನು ಕೆಡವಿ, ತಮ್ಮ ಕೈಗೆ ಅಧಿಕಾರ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಹೀಗಾಗಿ ನಮ್ಮ ನಾಯಕರು ಎಚ್ಚರಿಕೆಯಿಂದ ಇರಬೇಕು. ಬಡ ಜನರ ರಕ್ಷಣೆಗಾಗಿ ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಅವರ ರಕ್ಷಣೆ ಮಾಡುವುದು ನಿಮ್ಮ ಕೈಯಲ್ಲಿದೆ. ಬಿಜೆಪಿಯವರಂತೂ ಲೂಟಿ, ಜಗಳ ಮಾಡಿಸಲು ನಿಂತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು. 

ADVERTISEMENT

‘ದೇಶದ ಸ್ವಾತಂತ್ರ್ಯಕ್ಕಾಗಿ ಜವಾಹರಲಾಲ್‌ ನೆಹರೂ ಅವರು ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯನ್ನು ಆರಂಭಿಸಿದ್ದರು. ದೇಶಕ್ಕಾಗಿ ಕೆಲಸ ಮಾಡಿದ ಸಂಸ್ಥೆಯ ಮೇಲೆ ಇ.ಡಿಯಿಂದ ದಾಳಿ ನಡೆಸಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ವಿರುದ್ಧ ಚಾರ್ಜ್‌ಶೀಟ್‌ ದಾಖಲಿಸಿರುವ ಇವರಿಗೆ ನಾಚಿಕೆಯಾಗಬೇಕು. ನಿಮ್ಮ ಗಂಟನ್ನು ಹೊಡೆದಿದ್ದಾರಾ? ನೀವೇನು ಚಂದಾ ಕೊಟ್ಟು ಈ ಪತ್ರಿಕೆಯನ್ನು ಮಾಡಿದ್ದೀರಾ’ ಎಂದು ಖರ್ಗೆ ಹರಿಹಾಯ್ದರು. 

‘ನಿಮ್ಮ ಆರ್‌ಎಸ್‌ಎಸ್‌ನ ಮುಖವಾಣಿ ಆರ್ಗನೈಸರ್‌ ಪತ್ರಿಕೆಯು ಜನರ ಬುದ್ಧಿಯನ್ನು ಕೆಡಿಸುತ್ತಿದೆ. ದೇಶದಲ್ಲಿ ಹೆಚ್ಚಿನ ಜಮೀನು ಕ್ರಿಶ್ಚಿಯನ್ನರ ಬಳಿ ಇದೆ. ಕ್ರಿಶ್ಚಿಯನ್ನರ ಬಳಿಯಿರುವ 7 ಕೋಟಿ ಹೆಕ್ಟೇರ್‌ ವಶಪಡಿಸಿಕೊಳ್ಳುವುದು ಮುಂದಿನ ಗುರಿ ಎಂದು ಆರ್ಗನೈಸರ್ ಪತ್ರಿಕೆಯು ಬರೆದಿದೆ. ಮುಸ್ಲಿಮರ ನಂತರ ಈಗ ಕ್ರಿಶ್ಚಿಯನ್ನರ ಸರದಿ ಬಂದಿದೆ. ದೇಶ, ಸಮಾಜ, ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದೀರಿ. ಇಂಥವರಿಂದ ದೇಶದ ಜನರ ಉದ್ಧಾರ ಆಗುವುದಿಲ್ಲ’ ಎಂದು ಹೇಳಿದರು. 

‘ಇ.ಡಿ ಮೂಲಕ ಚಾರ್ಚ್‌ಶೀಟ್‌ ಹಾಕಿಸಿದರೆ ಕಾಂಗ್ರೆಸ್‌ ಬಗ್ಗುವುದಿಲ್ಲ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮಣಿಯುವುದಿಲ್ಲ. ನಾವು ದೇಶವನ್ನು ಕಟ್ಟುತ್ತೇವೆ. ಬಿಜೆಪಿ ಸರ್ಕಾರವನ್ನು ಒದ್ದು ಓಡಿಸುತ್ತೇವೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಉದ್ಯೋಗ ಮೇಳವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರಿಗೆ 10 ವರ್ಷಗಳಲ್ಲಿ 20 ಲಕ್ಷ ಉದ್ಯೋಗವನ್ನೂ ಕೊಡಲು ಸಾಧ್ಯವಾಗಿಲ್ಲ. ಸುಳ್ಳು ಹೇಳಿಕೆಗಳನ್ನು ನೀಡಿದರೇ ಹೊರತು ಯುವಕರಿಗೆ ಉದ್ಯೋಗ ಕೊಡಲಿಲ್ಲ’ ಎಂದು ಟೀಕಿಸಿದರು.

‘ಸಮೀಕ್ಷೆಯ ವರದಿ ಪ್ರಕಾರ ದೇಶದಲ್ಲಿ ಶೇ 18.9ರಷ್ಟು ನಿರುದ್ಯೋಗ ಇದೆ. ಆದರೆ, ಕರ್ನಾಟಕದಲ್ಲಿ ಕೇವಲ ಶೇ 2.5ರಷ್ಟು ನಿರುದ್ಯೋಗವಿದೆ. ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಯುವನಿಧಿ ಯೋಜನೆಯ ಮೂಲಕ ನಿರುದ್ಯೋಗಿಗಳಿಗೆ ಭತ್ಯೆಯನ್ನೂ ನೀಡುತ್ತಿದ್ದೇವೆ’ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಚಿವರಾದ ಪ್ರಿಯಾಂಕ್‌ ಖರ್ಗೆ, ರಾಮಲಿಂಗಾ ರೆಡ್ಡಿ, ಶರಣಬಸಪ್ಪ ದರ್ಶನಾಪುರ, ಡಾ.ಎಂ.ಸಿ. ಸುಧಾಕರ್‌ ಹಾಜರಿದ್ದರು.

ಕಲಬುರಗಿ ವಿಭಾಗ ಮಟ್ಟದ ಉದ್ಯೋಗ ಮೇಳದಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಮುಗಿಬಿದ್ದ ಉದ್ಯೋಗಾಕಾಂಕ್ಷಿಗಳು ಪ್ರಜಾವಾಣಿ ಚಿತ್ರ:ತಾಜುದ್ದೀನ್‌ ಆಜಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.