ADVERTISEMENT

ಮರ್ಯಾದೆಗೇಡು ಹತ್ಯೆ–ತಂದೆ ಬಂಧನ

ಮಗಳನ್ನು ಕೊಂದ ಆರೋಪದಡಿ ತಂದೆಯ ಬಂಧನ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 18:41 IST
Last Updated 29 ಆಗಸ್ಟ್ 2025, 18:41 IST

ಕಲಬುರಗಿ: ಅನ್ಯಜಾತಿ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಕತ್ತು ಹಿಸುಕಿ ಮರ್ಯಾದೆಗೇಡು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಮೇಳಕುಂದಾ (ಬಿ) ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಯುವತಿ ಕವಿತಾ ಕೊಳ್ಳುರ (18) ಮೃತರು. ಯುವತಿಯ ತಂದೆ ಶಂಕರ ಕೊಳ್ಳುರ ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಲಿಂಗಾಯತ ಸಮುದಾಯಕ್ಕೆ ಯುವತಿಗೆ, ಗ್ರಾಮದ ಕುರುಬ ಜಾತಿಯ ಆಟೊ ಚಾಲಕನ ಪ್ರೀತಿಸುತ್ತಿದ್ದಳು. ‘ಆ ಯುವಕನನ್ನೇ ಮದುವೆ ಆಗುವೆ. ಇಲ್ಲ ಮನೆ ಬಿಟ್ಟು ಹೋಗುವೆ’ ಎಂದು ಯುವತಿ ಪಟ್ಟು ಹಿಡಿದದ್ದಳು.

ADVERTISEMENT

ಈ ಕುರಿತು ಆಗಸ್ಟ್‌ 27ರಂದು ಯುವತಿ ಹಾಗೂ ಕುಟುಂಬದ ನಡುವೆ ಮತ್ತೆ ಗಲಾಟೆ ನಡೆದಿತ್ತು. ಮಗಳು ಅನ್ಯಜಾತಿ ಯುವಕನ ಜೊತೆ ಹೋದರೆ, ಮರ್ಯಾದೆ ಹೋಗುತ್ತದೆ ಎಂದುಕೊಂಡು ತಂದೆ ಹಾಗೂ ಇತರ ಇಬ್ಬರು ಸೇರಿಕೊಂಡು ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಯುವತಿ  ಬಾಯಲ್ಲಿ ಕ್ರಿಮಿನಾಶಕ ಹಾಕಿದ್ದಾರೆ. ವಿಷ ಕುಡಿದು ಮೃತಪಟ್ಟಿದ್ದಾಳೆ ಎಂದು ಗ್ರಾಮದಲ್ಲಿ ಸುದ್ದಿ ಹಬ್ಬಿಸಿ, ಆಗಸ್ಟ್‌ 28ರಂದು ಬೆಳಿಗ್ಗೆ 9 ಗಂಟೆ ಹೊತ್ತಿಗೆ ಶವವನ್ನು ಸುಟ್ಟು ಹಾಕಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಯುವತಿ ತಂದೆಯನ್ನು ಬಂಧಿಸಲಾಗಿದೆ. ಈ ಕೃತ್ಯಕ್ಕೆ ನೆರವಾದ ಇಬ್ಬರ ಬಗ್ಗೆ ಮಾಹಿತಿ ಸಿಕ್ಕಿದೆ’ ಎಂದು ನಗರ ಪೊಲೀಸ್ ಕಮಿಷನರ್‌ ಶರಣಪ್ಪ ಎಸ್‌.ಡಿ. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಫರಹತಾಬಾದ್‌ ಠಾಣೆ ಪೊಲೀಸರು ಈ ಕುರಿತು ಮೂವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.