ADVERTISEMENT

‘ಯುವ ಸಮುದಾಯ ಕ್ರಿಯಾಶೀಲವಾಗಲಿ’

‘ಗುರು ಸಾವಿತ್ರಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಗರ ಪೊಲೀಸ್‌ ಆಯುಕ್ತ ಡಾ.ವೈ.ಎಸ್. ರವಿಕುಮಾರ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 7:38 IST
Last Updated 14 ಸೆಪ್ಟೆಂಬರ್ 2021, 7:38 IST
ಕಲಬುರ್ಗಿಯಲ್ಲಿ ಸೋಮವಾರ ಶಿಕ್ಷಕರಾದ ಕಮಲಾಬಾಯಿ ರೇವಪ್ಪಗೋಳ, ಸರೂಬಾಯಿ ಹೆಗ್ಗಿ, ಚನ್ನಮ್ಮ ಗುಣಾರಿ, ವಿಜಯಲಕ್ಷ್ಮೀ ಗದಲೇಗಾಂವ, ಮಹ್ಮದ್ ಹನೀಫ್‌ ಮಕಾನದಾರ ಅವರಿಗೆ ‘ಗುರು ಸಾವಿತ್ರಿ’ ಪ್ರಶಸ್ತಿ ನೀಡಲಾಯಿತು
ಕಲಬುರ್ಗಿಯಲ್ಲಿ ಸೋಮವಾರ ಶಿಕ್ಷಕರಾದ ಕಮಲಾಬಾಯಿ ರೇವಪ್ಪಗೋಳ, ಸರೂಬಾಯಿ ಹೆಗ್ಗಿ, ಚನ್ನಮ್ಮ ಗುಣಾರಿ, ವಿಜಯಲಕ್ಷ್ಮೀ ಗದಲೇಗಾಂವ, ಮಹ್ಮದ್ ಹನೀಫ್‌ ಮಕಾನದಾರ ಅವರಿಗೆ ‘ಗುರು ಸಾವಿತ್ರಿ’ ಪ್ರಶಸ್ತಿ ನೀಡಲಾಯಿತು   

ಕಲಬುರ್ಗಿ: ‘ಯುವ ಸಮುದಾಯಕ್ಕೆ ಹೆಚ್ಚು ಪ್ರೋತ್ಸಾಹ ನೀಡಿ, ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿದರೆ ದೇಶವು ಇನ್ನಷ್ಟು ಬಲಿಷ್ಠವಾಗಲಿದೆ’ ಎಂದು ನಗರ ಪೊಲೀಸ್‌ ಕಮಿಷನರ್ ಡಾ.ವೈ.ಎಸ್. ರವಿಕುಮಾರ ಹೇಳಿದರು.

ವಿಶ್ವಜ್ಯೋತಿ ಪ್ರತಿಷ್ಠಾನ ಹಾಗೂ ಛಪ್ಪರಬಂದಿ ಪ್ರಭಾಕರ ಫೌಂಡೇಷನ್‍ ಸಹಯೋಗದೊಂದಿಗೆ ನಗರದಲ್ಲಿ ಸೋಮವಾರ ಏರ್ಪಡಿಸಿದ ಜಿಲ್ಲಾ ಮಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಸಮಾರಂಭ ಹಾಗೂ ಜಿಲ್ಲೆಯ ಐವರು ಶಿಕ್ಷಕರಿಗೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಸ್ಮಾರಕ ‘ಗುರು ಸಾವಿತ್ರಿ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ ಪಾಟೀಲ ಮಾತನಾಡಿ, ‘ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆಯಿಂದ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಹಾಗಾಗಿ, ಫುಲೆ ಅವರ ವ್ಯಕ್ತಿತ್ವ ಇಂದಿನ ಶಿಕ್ಷಕರಿಗೆ ದಾರಿ ದೀಪವಾಗಬೇಕಾಗಿದೆ’ ಎಂದರು.

ADVERTISEMENT

ಪ್ರತಿಷ್ಠಾನ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ‘ದೇಶದಲ್ಲಿ ಹೆಣ್ಣು ಮಕ್ಕಳು ತಲೆಎತ್ತಿ ನಡೆಯಬೇಕು ಎಂದರೆ ಸಮಾಜದಲ್ಲಿ ಅನಿಷ್ಠ ಪದ್ಧತಿಗಳು ನಿರ್ಮೂಲನೆ ಆಗಬೇಕು. ಅದಕ್ಕೆ ಶಿಕ್ಷಣ ಅತ್ಯಂತ ಮುಖ್ಯ. ಅದನ್ನು ಅರಿತು 1847ರಲ್ಲಿಯೇ ಹೆಣ್ಣುಮಕ್ಕಳಿಗಾಗಿ ಶಾಲೆ ಪ್ರಾರಂಭಿಸಿದ ಮಹಾತಾಯಿ ಸಾವಿತ್ರಿಬಾಯಿ ಫುಲೆ’ ಎಂದರು.

ಸಂಶೋಧಕ ಮುಡುಬಿ ಗುಂಡೇರಾವ,ಫೌಂಡೇಷನ್ ಮುಖ್ಯಸ್ಥ ಡಾ.ಶರಣರಾಜ್ ಛಪ್ಪರಬಂದಿ, ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಕರಬಸಯ್ಯ ಮಠ, ನಾಗೇಂದ್ರಪ್ಪ ಮಾಡ್ಯಾಳೆ, ಪ್ರಭುಲಿಂಗ ಮೂಲಗೆ, ಪ್ರಭವ ಪಟ್ಟಣಕರ್, ಭುವನೇಶ್ವರಿ ಹಳ್ಳಿಖೇಡ, ಶಿವಲೀಲಾ ತೆಗನೂರ, ಸಿದ್ಧರಾಮ ಹಂಚನಾಳ, ಸಂತೋಷ ಕುಡಳ್ಳಿ, ಮಂಜುನಾಥ ಕಂಬಳಿಮಠ, ಶಿವಾನಂದ ಮಠಪತಿ, ವೀರೇಶ ಬೋಳಶೆಟ್ಟಿ, ಅಸ್ತಾಕ್ ಪಟೇಲ್, ಶರಣಪ್ಪ ದೇಸಾಯಿ, ವಿಜಯಲಕ್ಷ್ಮಿ ಹಿರೇಮಠ, ಜ್ಯೋತಿ ಕೋಟನೂರ, ಸಿದ್ಧಲಿಂಗ ಬಾಳಿ, ಚಂದ್ರಕಾಂತ ಬಿರಾದಾರ, ಶಿವಪುತ್ರ ಹಾಗರಗಿ ಇದ್ದರು.

ಪ್ರಶಸ್ತಿ ಪುರಸ್ಕೃತರು: ಶಿಕ್ಷಕ ವೃತ್ತಿಯ ಜತೆಗೆ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಕಮಲಾಬಾಯಿ ರೇವಪ್ಪಗೋಳ, ಸರೂಬಾಯಿ ಹೆಗ್ಗಿ, ಚನ್ನಮ್ಮ ಗುಣಾರಿ, ವಿಜಯಲಕ್ಷ್ಮೀ ಗದಲೇಗಾಂವ, ಮಹ್ಮದ್ ಹನೀಫ್‌ ಮಕಾನದಾರ ಅವರಿಗೆ ‘ಗುರು ಸಾವಿತ್ರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.