ADVERTISEMENT

ಕೋವಿಡ್-19: ವೈದ್ಯಕೀಯ ತ್ಯಾಜ್ಯ ವಿಲೇವಾರಿಯಲ್ಲಿಯೂ ಜಾಗೃತಿ

ಕೊರೊನಾ ವೈರಸ್‌ ಭೀತಿ: ಆಸ್ಪತ್ರೆ, ನರ್ಸಿಂಗ್‌ ಹೋಮ್‌, ಕ್ಲಿನಿಕ್‌ಗಳಲ್ಲಿ ಸ್ವಚ್ಛತೆಗೆ ಆದ್ಯತೆ

ಎಲ್‌.ಮಂಜುನಾಥ್‌.ಸಾಸಲು, ದೊಡ್ಡಬಳ್ಳಾಪುರ ತಾ.
Published 22 ಮಾರ್ಚ್ 2020, 19:30 IST
Last Updated 22 ಮಾರ್ಚ್ 2020, 19:30 IST
ಕಲಬುರ್ಗಿಯ ಆಸ್ಪತ್ರೆಯೊಂದರಿಂದ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಪರಿಸರ ಶಿಕ್ಷಣ ಕೇಂದ್ರದ ಸಿಬ್ಬಂದಿ ಸಂಗ್ರಹಿಸಿ ವಾಹನದಲ್ಲಿ ಹಾಕುತ್ತಿರುವುದು
ಕಲಬುರ್ಗಿಯ ಆಸ್ಪತ್ರೆಯೊಂದರಿಂದ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಪರಿಸರ ಶಿಕ್ಷಣ ಕೇಂದ್ರದ ಸಿಬ್ಬಂದಿ ಸಂಗ್ರಹಿಸಿ ವಾಹನದಲ್ಲಿ ಹಾಕುತ್ತಿರುವುದು   

ಕಲಬುರ್ಗಿ: ಕೊರೊನಾ ವೈರಸ್‌ ಭೀತಿ ಎಲ್ಲೆಡೆ ಆವರಿಸಿದ್ದು, ಸ್ವಚ್ಛತೆಯತ್ತ ಎಲ್ಲರೂ ಗಮನಹರಿಸುತ್ತಿದ್ದಾರೆ. ಆಸ್ಪತ್ರೆ, ಕ್ಲಿನಿಕ್, ನರ್ಸಿಂಗ್‌ ಹೋಮ್‌ಗಳಲ್ಲಿ ಸ್ವಚ್ಛತೆ ಜತೆಗೆ ಇಲ್ಲಿ ಉತ್ಪತ್ತಿಯಾಗುವ ಜೈವಿಕ ವೈದ್ಯಕೀಯ ತ್ಯಾಜ್ಯಗಳ ನಿರ್ವಹಣೆ ಹಾಗೂ ವಿಲೇವಾರಿಯಲ್ಲಿ ಇನ್ನೂ ಹೆಚ್ಚಿನ ಜಾಗ್ರತೆ ವಹಿಸುವುದು ಎಂದಿಗಿಂತಲೂ ಇಂದು ತುರ್ತು ಇದೆ.

ವ್ಯವಸ್ಥಿತವಾಗಿ ಜೈವಿಕ ವೈದ್ಯಕೀಯ ತ್ಯಾಜ್ಯಗಳ ನಿರ್ವಹಣೆ ಹಾಗೂ ವಿಲೇವಾರಿ ಮಾಡಬೇಕು. ತಪ್ಪಿದಲ್ಲಿ ನೋಟಿಸ್‌ ನೀಡುವ ಜತೆಗೆ ಹೆಚ್ಚುವರಿ ದಂಡವನ್ನೂ ವಿಧಿಸಲಾಗುವುದು ಎಂದು ಮಾರ್ಚ್‌ 16ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ನಗರ ಸೇರಿದಂತೆ ಜಿಲ್ಲೆಯಲ್ಲಿನ ನೋಂದಾಯಿತ ಆಸ್ಪತ್ರೆ, ನರ್ಸಿಂಗ್‌ ಹೋಮ್‌, ಕ್ಲಿನಿಕ್‌ ಮತ್ತುಪರಿಸರ ಶಿಕ್ಷಣ ಕೇಂದ್ರಕ್ಕೆ ಸೂಚನಾ ಪತ್ರವನ್ನು ರವಾನಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್‌ ಹರಡುವಿಕೆ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ಜೈವಿಕ ವೈದ್ಯಕೀಯ ತ್ಯಾಜ್ಯದ ಜೊತೆಗೆ ಮನೆಯಲ್ಲಿಯೂ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ತ್ಯಾಜ್ಯವನ್ನೂ ವ್ಯವಸ್ಥಿತವಾಗಿ ವಿಂಗಡಿಸಿ ವಿಲೇವಾರಿ ಮಾಡಬೇಕಾಗಿದೆ.

ADVERTISEMENT

ಸರ್ಕಾರಿ, ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಮ್‌ ಹಾಗೂ ಕ್ಲಿನಿಕ್‌ಗಳು ಸೇರಿದಂತೆ ನಗರದಲ್ಲಿ ಪ್ರಸ್ತುತ 228 ನೋಂದಾಯಿತ ಆಸ್ಪತ್ರೆಗಳಿವೆ. ಇವುಗಳಲ್ಲಿ ಉತ್ಪತ್ತಿಯಾಗುವ ಜೈವಿಕ ವೈದ್ಯಕೀಯ ತ್ಯಾಜ್ಯಗಳ ವಿಲೇವಾರಿ ಮಾಡುವುದಕ್ಕಾಗಿಯೇ ನಗರದಲ್ಲಿ ಪರಿಸರ ಶಿಕ್ಷಣ ಕೇಂದ್ರ (CEE- Center for Environment Education) ಎಂಬ ಎನ್‌ಜಿಒ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ವೈದ್ಯಕೀಯ ತ್ಯಾಜ್ಯಗಳ ವ್ಯವಸ್ಥಿತ ವಿಲೇವಾರಿಗಾಗಿ ಪರಿಸರ ಶಿಕ್ಷಣ ಕೇಂದ್ರವು ನಾಲ್ಕು ವಾಹನಗಳನ್ನು ಹೊಂದಿದೆ. ಎರಡು ವಾಹನಗಳು ತಾಲ್ಲೂಕು ಮಟ್ಟದಲ್ಲಿನ ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ಜೈವಿಕ ವೈದ್ಯಕೀಯ ತ್ಯಾಜ್ಯಗಳನ್ನು ವಿಲೇವಾರಿ ಮಾಡುತ್ತಿವೆ. ಉಳಿದ ಎರಡು ವಾಹನಗಳು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

‘ನಗರದಲ್ಲಿನ ನೋಂದಾಯಿತ ಪ್ರತಿ ಆಸ್ಪತ್ರೆಗಳು ತಮ್ಮಲ್ಲಿ ಉತ್ಪತ್ತಿಯಾಗುವ ವೈದ್ಯಕೀಯ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಂಗಡಣೆ ಮಾಡುವುದಕ್ಕಾಗಿಯೇ ತಾವೇ ಹಳದಿ ಬ್ಯಾಗ್‌, ಕೆಂಪು ಬ್ಯಾಗ್‌, ನೀಲಿ ಬ್ಯಾಗ್‌, ಬಿಳಿ ಬ್ಯಾಗ್‌ ಹಾಗೂ ಹಸಿರು ಬ್ಯಾಗ್‌ಗಳನ್ನು ಮಾಡಿಕೊಂಡು ಅವುಗಳಲ್ಲಿಯೇ ನಿಗದಿ ಪಡಿಸಿದ ವೈದ್ಯಕೀಯ ತ್ಯಾಜ್ಯಗಳನ್ನು ಹಾಕುತ್ತಾರೆ. ನಂತರ ನಮ್ಮ ಸಿಬ್ಬಂದಿ ವಾಹನಗಳ ಮೂಲಕ ಅವುಗಳನ್ನು ಸಂಗ್ರಹಿಸಿ ನಗರದ ಹೊರವಲಯದಲ್ಲಿನ ಶರಣಸಿರಸಗಿ ಗ್ರಾಮದ ಬಳಿ ಸರ್ಕಾರವೇ ನೀಡಿರುವ 6 ಎಕರೆ ಪ್ರದೇಶದಲ್ಲಿ ಇರುವ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ಮೂಲನೆ ಘಟಕದಲ್ಲಿ ಅವುಗಳನ್ನು ವ್ಯವಸ್ಥಿತವಾಗಿ ನಿರ್ಮೂಲನೆ ಮಾಡಲಾಗುತ್ತದೆ‘ ಎಂದು ಪರಿಸರ ಶಿಕ್ಷಣ ಕೇಂದ್ರದ ವ್ಯವಸ್ಥಾಪಕ ಸಂತೋಷ ಹೊನ್ನಾಳ್ಕರ್‌ ಅವರು ಹೇಳಿದರು.

‘ವೈದ್ಯಕೀಯ ತ್ಯಾಜ್ಯ ಸಂಗ್ರಹ ಸಂಬಂಧ ನಗರದ ಲಾಬ್‌ಗಳಿಗೆ ‘L' , ಆಸ್ಪತ್ರೆಗಳಿಗೆ ’H', ಹಾಗೂ ಕ್ಲಿನಿಕ್‌ಗಳಿಗೆ 'C' ಕೋಡ್‌ಗಳನ್ನು ನೀಡಲಾಗಿದೆ. ಈ ಕೋಡ್‌ಗಳ ಮೂಲಕವಾಗಿಯೇ ವೈದ್ಯಕೀಯ ತ್ಯಾಜ್ಯದ ಸೂಕ್ಷ್ಮತೆಯನ್ನು ಗುರುತಿಸಿ, ವಿಲೇವಾರಿ ಮಾಡಲಾಗುತ್ತದೆ.ನಗರದಲ್ಲಿಯೇ ನಿತ್ಯ ಕನಿಷ್ಠ 400 ರಿಂದ 500 ಕೆ.ಜಿ ಜೈವಿಕ ವೈದ್ಯಕೀಯ ತ್ಯಾಜ್ಯ ಸಂಗ್ರಹವಾಗುತ್ತದೆ. ಅದರಲ್ಲಿಯೂ ಇಲ್ಲಿನ ಇಎಸ್‌ಐ, ಬಸವೇಶ್ವರ ಆಸ್ಪತ್ರೆ ಹಾಗೂ ಕ್ಯಾನ್ಸರ್‌ ಆಸ್ಪತ್ರೆಗಳಲ್ಲಿಯೇ ಸುಮಾರು 200 ಕೆಜಿಗೂ ಅಧಿಕ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಎಲ್ಲವನ್ನೂ ನಿತ್ಯ ಸಂಗ್ರಹಿಸಿ, ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತದೆ. ರಕ್ತದ ಕಲೆ ಇರುವಂತಹ ತ್ಯಾಜ್ಯವನ್ನು ಸಂಗ್ರಹಿಸಿದ 48 ಗಂಟೆಯೊಳಗೆ ವಿಲೇವಾರಿ ಮಾಡಲಾಗುತ್ತದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.