ಹನುಮಸಾಗರ: ಸಮೀಪದ ಚಂದಾಲಿಂಗೇಶ್ವರ ಬೆಟ್ಟವು ಅಪರೂಪದ ಆಯುರ್ವೇದ ಸಸ್ಯ ಸಂಪತ್ತಿನ ಖಜಾನೆಯಾಗಿದೆ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದಿದೆ. ಇಳಕಲ್‌ನ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕ ವಿಜಯ ಮಹಾಂತೇಶ ಮತ್ತು ರಾಮಣ್ಣ ಪರಪ್ಪ ಕರಡಿ ಆಯುರ್ವೇದ ಆಸ್ಪತ್ರೆಯ ವೇದ್ಯಾಧಿಕಾರಿಗಳ ತಂಡವು ಈಚೆಗೆ ಬೆಟ್ಟಕ್ಕೆ ಭೇಟಿ ನೀಡಿ, ವಿವಿಧ ಆಯುರ್ವೇದ ಸಸ್ಯಗಳನ್ನು ಗುರುತಿಸುವಲ್ಲಿ ಯಶಸ್ವಿಯಾದರು.
ಉಪನ್ಯಾಸಕಿ ಡಾ.ಮುಕ್ತಾ ಅರಳಿ, ವೈದ್ಯಾಧಿಕಾರಿ ಡಾ.ಅರವಿಂದ ಕನವಳ್ಳಿ, ಡಾ.ಶಂಕರ ಹುಲಮನಿ, ಡಾ.ವರ್ಷಾ, ಪಾರಂಪರಿಕ ನಾಟಿ ವೈದ್ಯರು ಶಿವಶಂಕರ ಮೆಡಿಕೇರಿ, ಜ್ಞಾನನಗೌಡ ಮಾಲಿಪಾಟೀಲ, ವೀರಭದ್ರಯ್ಯ ಚೌಕಿಮಠ, ಅಶೋಕ ಪತ್ತಾರ ಮುಂತಾದವರು ಭಾಗವಹಿಸಿದ್ದರು. ಅರಣ್ಯ ಇಲಾಖೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಪರಿಚಯ ಹಾಗೂ ಅಧ್ಯಯನ ಕಾರ್ಯಾಗಾರದಲ್ಲಿ, ಸುಮಾರು 50-60ಕ್ಕೂ ಹೆಚ್ಚು ಅಪರೂಪದ ಸಸ್ಯಪ್ರಭೇದಗಳನ್ನು ಗುರುತಿಸಲಾಗಿದೆ ಎಂದು ವೈದ್ಯರು ತಿಳಿಸಿದರು.
ಗುರುತಿಸಲಾದ ಮುಖ್ಯಸಸ್ಯಗಳಲ್ಲಿ ಪಾತಾಳ ಗರುಡ, ಅಪಮಾರ್ಗ, ಹಿಪ್ಪೆ, ಲತಾಕರಂಜ, ಮಹಾಲಿಂಗನಬಳ್ಳಿ, ಗಜುಗ, ಚಿತ್ರಮುಲ, ನಿರ್ಗುಂಡಿ, ಅಶ್ವಗಂದಾ, ಮುಸಲಿ, ಪರ್ಷಭೇದ, ಕಾಗಿಮೋತಿ, ಮೊಸವಾಳ, ಬ್ರಹ್ಮದಂಡಿ, ಗಿಣಿಮೂಗಿನ ಗಡ್ಡೆ, ರಕ್ತಮಂಡಲ, ಪರ್ಪಟಾ, ಆಡಿವಿ ಈರುಳ್ಳಿ ಮುಂತಾದ ಅಪರೂಪದ ಹಕ್ಕುಮೂಲಿಕೆಗಳಿವೆ.
ಪಾರಂಪರಿಕ ನಾಟಿ ವೈದ್ಯ ಶಿವಶಂಕರ ಮೆಡಿಕೇರಿ ಮಾತನಾಡಿ, ‘ಚಂದಾಲಿಂಗೇಶ್ವರ ಬೆಟ್ಟದ ಪರಿಸರ ಅತ್ಯಂತ ಸಮೃದ್ಧವಾಗಿದೆ. ಆಯುರ್ವೇದ ಸಸ್ಯ ಸಂಪತ್ತಿಗೆ ಐತಿಹಾಸಿಕವಾಗಿ ವಿಶಿಷ್ಟ ಸ್ಥಾನವಿದೆ. ಪರಿಸರದ ಸಂರಕ್ಷಣೆ ಬಹುಮುಖ್ಯವಾಗಿದ್ದು, ಸಾರ್ವಜನಿಕರಿಗೂ ಆಯುರ್ವೇದದ ಮಹತ್ವ ತಿಳಿಸುವ ಅಗತ್ಯವಿದೆ‘ ಎಂದು ಹೇಳಿದರು.
ಆಯುರ್ವೇದ ವಿದ್ಯಾರ್ಥಿಗಳಿಂದ 1000ಕ್ಕಿಂತ ಹೆಚ್ಚು ಔಷಧೀಯ ಗಿಡಗಳ ಬೀಜದ ಉಂಡೆಗಳನ್ನು ಬಿತ್ತುವುದು, ಜಂಬು ನಿರಲಿ, ಶಿವಾನಿ, ಹಲಸಿನ ಮರ, ಮಾವು ಮುಂತಾದ ವಿವಿಧ ಗಿಡದ ಬೀಜಗಳನ್ನು ಬೆಟ್ಟದಲ್ಲಿ ಹರಡಲಾಯಿತು. ಅರಣ್ಯ ರಕ್ಷಕ ದಾನನಗೌಡ ಪಾಟೀಲ, ನೀಲಪ್ಪ ಕುದರಿ ಮತ್ತು ವಿವಿಧ ಆಯುರ್ವೇದ ಸಂಶೋಧಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.