ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಬಿಎ ಮೂರನೇ ಸೆಮಿಸ್ಟರ್‌ನ (ಎನ್‌ಇಪಿ) ಕಲ್ಯಾಣ ಕರ್ನಾಟಕದ ಇತಿಹಾಸ; ಡಿಎಸ್‌ಸಿ–6 ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಭಾರತದ ಇತಿಹಾಸ ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗಿದೆ.
ಪಠ್ಯಕ್ಕೆ ಸಂಬಂಧಿಸದೆ ಇರದ ಭಾರತದ ಇತಿಹಾಸಕ್ಕೆ ಸಂಬಂಧಿಸಿದ ಅತಿಹೆಚ್ಚು ಪ್ರಶ್ನೆಗಳನ್ನು ಮುದ್ರಿಸಿದ್ದಕ್ಕೆ ವಿದ್ಯಾರ್ಥಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅವೇ ಪ್ರಶ್ನೆಗಳಿಗೆ ಉತ್ತರ ಬರೆಸುವಂತೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸೂಚಿಸಿದ್ದರಿಂದ ಉಪನ್ಯಾಸಕರು, ಕೊಠಡಿ ಮೇಲ್ವಿಚಾರಕರು ಬೇಸರಗೊಂಡಿದ್ದಾರೆ.
‘ಭಾರತದ ರಾಜಕೀಯ ಇತಿಹಾಸ; ಡಿಎಸ್‌ಸಿ–5 ಪರೀಕ್ಷೆಯು ಫೆಬ್ರುವರಿ 3ರಂದು ಮುಕ್ತಾಯವಾಗಿತ್ತು. ಅದೇ ಪಠ್ಯದ ಪ್ರಶ್ನೆಗಳನ್ನು ಗುರುವಾರ ನಡೆದ ಕಲ್ಯಾಣ ಕರ್ನಾಟಕ ಇತಿಹಾಸದ ಪರೀಕ್ಷೆಯಲ್ಲಿ ಕೇಳಲಾಗಿದೆ. ಪ್ರಶ್ನೆ ಪತ್ರಿಕೆಯಲ್ಲಿನ ಪ್ರಮಾದದ ಬಗ್ಗೆ ಮೇಲ್ವಿಚಾರಕರು ವಿವಿಯ ಮೌಲ್ಯಮಾಪನ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಅವೇ ಪ್ರಶ್ನೆಗಳಿಗೆ ಉತ್ತರ ಬರೆಸುವಂತೆ ಸೂಚಿಸಿದರು’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಕಾಳಗಿಯ ಉಪನ್ಯಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಎರಡು ಅಂಕಗಳ 12 ಪ್ರಶ್ನೆಗಳಲ್ಲಿ 2 ಪ್ರಶ್ನೆಗಳು ಭಾರತದ ಇತಿಹಾಸದ್ದು ಕೇಳಲಾಗಿದೆ. ಐದು ಅಂಕದ ಆರು ಪ್ರಶ್ನೆಗಳು ಹಾಗೂ 10 ಅಂಕದ ನಾಲ್ಕು ಪ್ರಶ್ನೆಗಳು ಕಲ್ಯಾಣ ಕರ್ನಾಟಕದ ಹೊರತಾಗಿದ್ದವು. ಒಟ್ಟು 60 ಅಂಕಗಳಲ್ಲಿ 40 ಅಂಕಗಳು ಭಾರತದ ಇತಿಹಾಸಕ್ಕೆ ಸಂಬಂಧಿಸಿದ್ದವು ಬಂದಿದ್ದವು’ ಎಂದು ಮಾಹಿತಿ ನೀಡಿದರು.
ಶಿಸ್ತು ಕ್ರಮ: ‘ಪ್ರಶ್ನೆ ಪತ್ರಿಕೆಯಲ್ಲಿ ಬೇರೆ ಪ್ರಶ್ನೆಗಳು ಬಂದಿರುವುದಕ್ಕೆ ಪ್ರಶ್ನೆ ಪತ್ರಿಕೆಗಳು ಸಿದ್ಧಪಡಿಸಿದವರು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ಚರ್ಚೆ ಮಾಡಿ ಅವರ ವಿರುದ್ಧ ದಂಡ ಅಥವಾ ಬೇರೆ ಏನಾದರೂ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ. ಅನುಗ್ರಹ ಅಂಕ (ಗ್ರೇಸ್ ಮಾರ್ಕ್) ಕೊಡಬೇಕೆ ಅಥವಾ ಬೇಡವೆ ಎಂಬುದರ ಬಗ್ಗೆ ಇಂದು (ಶುಕ್ರವಾರ) ಸಭೆ ನಡೆಸಿ ತೀರ್ಮಾನಿಸುತ್ತೇವೆ’ ಎಂದು ಮಾಲ್ಯಮಾಪನ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.