ADVERTISEMENT

ಅಂಬೇಡ್ಕರ್ ಹಾಕಿದ ಬುನಾದಿ ಮೇಲೆ ಸೌಧ ಕಟ್ಟಿದ ಬಾಬೂಜಿ

ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಾಬು ಜಗಜೀವನರಾಂ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 14:14 IST
Last Updated 5 ಏಪ್ರಿಲ್ 2022, 14:14 IST
ಗುಲಬರ್ಗಾ ವಿ.ವಿ.ಯಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಂ ಜಯಂತ್ಯುತ್ಸವಕ್ಕೆ ಕುಲಪತಿ ಪ್ರೊ. ದಯಾನಂದ ಅಗಸರ ಚಾಲನೆ ನೀಡಿದರು. ಎಂ.ಬಿ. ದಳಪತಿ, ದಾಸನೂರ ಕೂಸಣ್ಣ, ಯೋಗೇಶ್, ಶರಣಬಸಪ್ಪ ಕೋಟೆಪ್ಪಗೋಳ, ಪ್ರೊ. ಲಿಂಗಪ್ಪ ಇದ್ದರು
ಗುಲಬರ್ಗಾ ವಿ.ವಿ.ಯಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಂ ಜಯಂತ್ಯುತ್ಸವಕ್ಕೆ ಕುಲಪತಿ ಪ್ರೊ. ದಯಾನಂದ ಅಗಸರ ಚಾಲನೆ ನೀಡಿದರು. ಎಂ.ಬಿ. ದಳಪತಿ, ದಾಸನೂರ ಕೂಸಣ್ಣ, ಯೋಗೇಶ್, ಶರಣಬಸಪ್ಪ ಕೋಟೆಪ್ಪಗೋಳ, ಪ್ರೊ. ಲಿಂಗಪ್ಪ ಇದ್ದರು   

ಕಲಬುರಗಿ: ‘ಡಾ. ಬಿ.ಆರ್‌. ಅಂಬೇಡ್ಕರ್ ಅವರು ಭವಿಷ್ಯದ ಭಾರತವನ್ನು ಗಮನದಲ್ಲಿಟ್ಟುಕೊಂಡು ಕಟ್ಟಿದ ಬುನಾದಿಯ ಮೇಲೆ ಡಾ. ಬಾಬು ಜಗಜೀವನರಾಂ ಅವರು ಸೌಧವನ್ನು ಕಟ್ಟಿ, ಒಂದು ಸ್ಪಷ್ಟ ರೂ‍‍‍ಪವನ್ನು ನೀಡಿದರು. ಡಾ.ಅಂಬೇಡ್ಕರ್ ಹಿರಿಯಣ್ಣನಾದರೆ, ಬಾಬೂಜಿ ತಮ್ಮನಿದ್ದಂತೆ’ ಎಂದು ಚಿಂತಕ ದಾಸನೂರು ಕೂಸಣ್ಣ ಅಭಿಪ್ರಾಯಪಟ್ಟರು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಾಬು ಜಗಜೀವನರಾಂ ಅಧ್ಯಯನ ಮತ್ತು ಸಂಶೋಧನೆ ಹಾಗೂ ವಿಸ್ತರಣಾ ಸಂಸ್ಥೆ ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಸಂವಿಧಾನದ ರಕ್ಷಣೆ ಮತ್ತು ದೇಶಾಭಿವೃದ್ಧಿಯಲ್ಲಿ ಡಾ. ಜಗಜೀವನರಾಂ ಅವರ ಕೊಡುಗೆ ಕುರಿತು ಉ‍ಪನ್ಯಾಸ ನೀಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸದರಲ್ಲಿ ದೇಶಕ್ಕೆ ಬೇಕಾದ ನೀತಿ, ನಿಯಮ ನಡಾವಳಿಗಳನ್ನು ರೂಪಿಸಬೇಕಾಗಿತ್ತು. ಹಾಗಾಗಿ, ಗಟ್ಟಿ ನಾಯಕತ್ವ ಬೇಕಾಗಿತ್ತು. ಅದನ್ನು ಜಗಜೀವನರಾಂ ಸಾಧ್ಯವಾಗಿಸಿದರು. ಸಂವಿಧಾನ ರಚನಾ ಸಮಿತಿಯಲ್ಲಿಯೂ ಇದ್ದರು. ಸಂವಿಧಾನ ರಚನೆಗಾಗಿ ರೂಪಿಸಲಾದ 22 ಸಮಿತಿಗಳ ಪೈಕಿ ಡಾ. ಅಂಬೇಡ್ಕರ್ ಅವರು ಕರಡು ರಚನಾ ಸಮಿತಿ ಅಧ್ಯಕ್ಷರಾಗಿದ್ದರೆ, ಜಗಜೀವನರಾಂ ಅವರು ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿದ್ದರು. ಡಾ. ಅಂಬೇಡ್ಕರ್, ಜಗಜೀವನರಾಂ, ಬಿ.ಎನ್. ರಾವ್ ಸೇರಿದಂತೆ ಹಲವರ ಚಿಂತನೆಗಳ ಫಲವಾಗಿ ಸಂವಿಧಾನ ರಚನೆಯಾಗಿದೆ’ ಎಂದರು.

‘ಡಾ.ಬಿ.ಆರ್‌. ಅಂಬೇಡ್ಕರ್ ಜಯಂತಿಗೆ ಪರ್ಯಾಯವಾಗಿ ಅಥವಾ ಅವರ ವ್ಯಕ್ತಿತ್ವಕ್ಕೆ ಪ್ರತಿಸ್ಪರ್ಧಿಯಾಗಿ ಡಾ. ಬಾಬು ಜಗಜೀವನರಾಂ ಅವರನ್ನು ಎಲ್ಲಿಯೂ ಪರಿಚಯಿಸುತ್ತಿಲ್ಲ. ಜಗಜೀವನರಾಂ ಅವರ ಬಗ್ಗೆ ಹೇಳುವಾಗ ಅಂಬೇಡ್ಕರ್ ಅವರ ಹೆಸರನ್ನು ಏಕೆ ಪ್ರಸ್ತಾಪಿಸುತ್ತೀರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇಬ್ಬರು ಮಹಾನ್ ವ್ಯಕ್ತಿಗಳ ಸಾಧನೆಗಳನ್ನು ಹೇಳಲೇಬೇಕಾಗುತ್ತದೆ’ ಎಂದು ಹೇಳಿದರು.

ADVERTISEMENT

ಅತಿಥಿಯಾಗಿದ್ದ ಧಾರವಾಡದ ಕರ್ನಾಟಕ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಂ.ಬಿ. ದಳಪತಿ ಮಾತನಾಡಿ, ‘ಸ್ವತಂತ್ರ ಭಾರತದ ಮೊದಲ ಕಾರ್ಮಿಕ ಸಚಿವರಾಗಿ, ಕೃಷಿ, ರೈಲ್ವೆ ಸಚಿವರಾಗಿ, ನಂತರ ಉಪ ಪ್ರಧಾನಿಗಳಾಗಿ ಡಾ. ಬಾಬೂಜಿ ಅವರು ಮಾಡಿದ ಸಾಧನೆ ಸ್ಮರಣೀಯ. ಇವರು ದೇಶದ ಮೊದಲ ಸಚಿವ ಸಂಪುಟದ ಅತ್ಯಂತ ಕಿರಿಯ ಸದಸ್ಯರಾಗಿದ್ದರು. 40 ವರ್ಷಗಳವರೆಗೆ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ. ವಿಕ್ರಮ್ ವಿಶ್ವವಿದ್ಯಾಲಯವು ಇವರು ಮಾಡಿದ ಘಟಿಕೋತ್ಸವ ಭಾಷಣವನ್ನೇ ಪಠ್ಯಪುಸ್ತಕವನ್ನಾಗಿ ಮಾಡಿತ್ತು’ ಎಂದರು.

ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಯೋಗೇಶ್ ಎಂ.ಬಿ. ಮಾತನಾಡಿದರು.

ಜಯಂತಿ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ, ರಂಗೋಲಿ, ಸಂಗೀತ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ, ವಿತ್ತಾಧಿಕಾರಿ ಪ್ರೊ.ಎನ್‌.ಬಿ. ನಡುವಿನಮನಿ, ಡಾ. ಬಾಬು ಜಗಜೀವನರಾಂ ಅಧ್ಯಯನ ಮತ್ತು ಸಂಶೋಧನೆ ಹಾಗೂ ವಿಸ್ತರಣಾ ಸಂಸ್ಥೆ ನಿರ್ದೇಶಕ ‍ಪ್ರೊ. ಕೆ. ಲಿಂಗಪ್ಪ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.