ADVERTISEMENT

ಕೋಲಿ ಪರ್ಯಾಯ ಪದ ಎಸ್ಟಿ ಪಟ್ಟಿಗೆ ಸೇರಿಸಲು ಬದ್ಧ

ಮಾತಾ ಮಾಣಿಕೇಶ್ವರಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಚಿವರ ಭರವಸೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 6:43 IST
Last Updated 17 ಆಗಸ್ಟ್ 2025, 6:43 IST
ಕಲಬುರಗಿ ನಗರದ ಬ್ರಹ್ಮಪೂರ ಬಡಾವಣೆಯಲ್ಲಿರುವ ಚೌಡೇಶ್ವರ ಕಾಲೊನಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮಾತಾ ಮಾಣಿಕೇಶ್ವರಿ ದೇವಸ್ಥಾನ ಮತ್ತು ಅಮ್ಮನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣ್ಯರು 
ಕಲಬುರಗಿ ನಗರದ ಬ್ರಹ್ಮಪೂರ ಬಡಾವಣೆಯಲ್ಲಿರುವ ಚೌಡೇಶ್ವರ ಕಾಲೊನಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮಾತಾ ಮಾಣಿಕೇಶ್ವರಿ ದೇವಸ್ಥಾನ ಮತ್ತು ಅಮ್ಮನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣ್ಯರು    

ಕಲಬುರಗಿ: ‘ಹಿಂದುಳಿದ ಕೋಲಿ ಸಮುದಾಯದ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಒಕ್ಕೊರಲಿನ ಒತ್ತಾಯಕ್ಕೆ ಸ್ಪಂದಿಸಿದ ಸಚಿವರಾದ ಈಶ್ವರ ಖಂಡ್ರೆ, ಡಾ.ಶರಣಪ್ರಕಾಶ ಪಾಟೀಲ, ಶರಣಬಸಪ್ಪ ದರ್ಶನಾಪುರ, ‘ರಾಜ್ಯ ಸರ್ಕಾರದಿಂದ ಮತ್ತೊಂದು ಬಾರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ’ ಎಂದರು.

ನಗರದ ಬ್ರಹ್ಮಪುರ ಬಡಾವಣೆಯಲ್ಲಿರುವ ಚೌಡೇಶ್ವರ ಕಾಲೊನಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮಾತಾ ಮಾಣಿಕೇಶ್ವರಿ ದೇವಸ್ಥಾನ ಮತ್ತು ಅಮ್ಮನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸಮ್ಮುಖದಲ್ಲಿ ಒಂದು ಸುತ್ತಿನ ಸಚಿವರ, ಶಾಸಕರ ಮತ್ತು ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಮತ್ತು ಬಾರ್ಕಿ ಐದು ಪರ್ಯಾಯ ಪದಗಳನ್ನು ಎಸ್‌ಟಿಗೆ ಸೇರಿಸಲು ಪ್ರಸ್ತಾವ ಸಿದ್ಧಪಡಿಸಲಾಗಿದೆ. ಕೋಲಿ ಸಮಾಜದೊಂದಿಗೆ ರಾಜ್ಯ ಸರ್ಕಾರ ನಿಲ್ಲಲಿದೆ’ ಎಂದರು.

ADVERTISEMENT

ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ‘ಕೋಲಿ ಸಮಾಜದ ಜತೆ ನಮ್ಮ ಸರ್ಕಾರ ಯಾವಾಗಲು ಬೆಂಬಲಕ್ಕೆ ನಿಂತು ಹೆಗಲಿಗೆ ಹೆಗ್ಗಲುಕೊಟ್ಟು ಸಹಕಾರ ಮಾಡಲಿದೆ. ಮಾಣಿಕೇಶ್ವರಿ ಅಮ್ಮನವರ ತತ್ವಾದರ್ಶ ಮೈಗೂಡಿಸಿಕೊಂಡರೆ ಜೀವನ ಪಾವನವಾಗಲಿದೆ’ ಎಂದು ಹೇಳಿದರು.

ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ, ‘ಗುಲಬರ್ಗಾ ವಿ.ವಿ.ಯಲ್ಲಿ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಆವರಣದಲ್ಲಿ ಚೌಡಯ್ಯನವರ ಪುತ್ಥಳಿ ಸಿದ್ಧಗೊಂಡಿದೆ. ಆದರೆ ಉದ್ಘಾಟನೆ ಮಾತ್ರ ಆಗಿಲ್ಲ. ಲಿಂಗ ಧಾರಣೆ ಮಾಡಿರುವ ವಿಗ್ರಹ ಇರುವುದರಿಂದ ಉದ್ಘಾಟನೆಗೊಂಡಿಲ್ಲ ಎಂಬ ಅಂತೆ ಕಂತೆಗಳಿವೆ. ಬಸವಣ್ಣನವರ ಸಮಕಾಲಿನ ಶರಣ ಅಂಬಿಗರ ಚೌಡಯ್ಯನವರಾಗಿದ್ದು, ಕೂಡಲೇ ವಿಗ್ರಹ ಉದ್ಘಾಟನೆಯಾಗಬೇಕು’ ಎಂದರು.

ತೋನಸನಹಳ್ಳಿಯ ಅಲ್ಲಮಪ್ರಭು ಸಂಸ್ಥಾನ ಮಠದ ಪೀಠಾಧಿಪತಿ ಮಲ್ಲಣ್ಣಪ್ಪ ಮಹಾರಾಜರು ಆರ್ಶೀವಚನ ನೀಡಿದರು. ಯಾನಾಗುಂದಿ ಮಾತಾ ಮಾಣಿಕೇಶ್ವರಿ ಆಶ್ರಮದ ಶಿವಯ್ಯ ಸ್ವಾಮಿ, ಶ್ರೀಶೈಲ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ತೋನಸನಹಳ್ಳಿಯ ಕೊತಲಪ್ಪ ಸ್ವಾಮೀಜಿ, ಲಿಂಗಸುಗೂರು ಆಶ್ರಮದ ನಂದೀಶ್ವರಿ ಅಮ್ಮ ಸಾನ್ನಿಧ್ಯ ವಹಿಸಿದ್ದರು.

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ವಿಧಾನಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಬಿ.ಜಿ. ಪಾಟೀಲ, ಕುಡಾ ಅಧ್ಯಕ್ಷ ಮಜಹರ್ ಆಲಂಖಾನ್, ಮೇಯರ್ ವರ್ಷಾ ಆರ್. ಜಾನೆ, ಉಪಮೇಯರ್ ತೃಪ್ತಿ ಲಾಖೆ, ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಮಾಜಿ ಮೇಯರ್ ಶರಣು ಮೋದಿ, ಕೋಲಿ ಗಂಗಾಮತ ಸಮಾಜದ ಮಾಜಿ ಅಧ್ಯಕ್ಷ ಬಿ.ಕೆ. ಮೋಹನಕುಮಾರ, ಪ್ರಮುಖರಾದ ನೀಲಕಂಠರಾವ್ ಮೂಲಗೆ, ವಿಜಯಕುಮಾರ ಕಲಮಣಕರ್, ಕೃಷ್ಣಾರಡ್ಡಿ, ಬಾಬಾ ಹೊನ್ನನಾಯಕ, ಸಾಯಬಣ್ಣ ನೀಲಪ್ಪಗೋಳ, ಅವ್ವಣ್ಣ ಮ್ಯಾಕೇರಿ, ಬಸವರಾಜ ಸಪ್ಪನಗೋಳ, ಸಿದ್ದು ಬಾನರ್, ಶಾಂತಪ್ಪ ಕೂಡಿ, ರಮೇಶ ನಾಟೀಕಾರ, ಉಮೇಶ ಮುದ್ನಾಳ, ಲಕ್ಷ್ಮಣ ಆವಂಟಿ, ನಾಗೇಂದ್ರ, ಬಸವರಾಜ ಬೂದಿಹಾಳ ಭಾಗವಹಿಸಿದ್ದರು.

ಹತ್ತು ವರ್ಷಗಳ ಹಿಂದೆ ಮಾಣಿಕೇಶ್ವರಿ ದೇವಸ್ಥಾನ ಸ್ಥಾಪಿಸಬೇಕು ಎಂಬ ಬಹುದಿನಗಳ ಬೇಡಿಕೆಯಿತ್ತು. ಅದೀಗ ಸರಾಗವಾಗಿ ನಡೆದಿದೆ. ಈಗ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕು ಎಂಬ ಬೇಡಿಕೆ ಈಡೇರಬೇಕಿದೆ
ತಿಪ್ಪಣ್ಣಪ್ಪ ಕಮಕನೂರ, ವಿಧಾನಪರಿಷತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.