ಅಫಜಲಪುರ: ಕಲಬುರಗಿ ಜಿಲ್ಲಾ ಕೇಂದ್ರದಲ್ಲಿ ರಾಜ್ಯ ಸರ್ಕಾರದಿಂದ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ತಾಲೂಕಿನ ಬಡದಾಳ ಗ್ರಾಮದ ಮಹಿಳೆಯರು ಧಿಕ್ಕರಿಸಿ ಗ್ರಾಮದ ಸಂಪರ್ಕ ರಸ್ತೆಗಳು ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ನಾಗರಿಕ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬುಧವಾರ ಬೆಂಬಲಿಸಿದರು.
ಧರಣಿಗೆ ಬೆಂಬಲಿಸಿ ಗ್ರಾಮದ ಮಹಿಳೆಯರು ಮಾತನಾಡಿ, ‘ಬಡದಾಳ ನಾಗರಿಕ ಹೋರಾಟ ಸಮಿತಿಯ ವತಿಯಿಂದ ಗ್ರಾಮದ ಸಂಪರ್ಕ ರಸ್ತೆಗಳ ಸುಧಾರಣೆಗಾಗಿ ನಡೆಯುತ್ತಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ 18ನೇ ದಿನಕ್ಕೆ ಕಾಲಿಟ್ಟಿದೆ. ಮಾ.13ರಂದು ಕಲಬುರಗಿಯಲ್ಲಿ ನಡೆಯುತ್ತಿರುವ ಗ್ಯಾರಂಟಿ ಸಮಾವೇಶಕ್ಕೆ ಗ್ರಾಮದ ವಿವಿಧ ಮಹಿಳಾ ಸಂಘಟನೆಯವರನ್ನು ಕಾರ್ಯಕ್ರಮಕ್ಕೆ ಬರುವಂತೆ ಸಾರಿಗೆ ಬಸ್ಸೊಂದನ್ನು ಬಡದಾಳ ಗ್ರಾಮಕ್ಕೆ ಕಳುಹಿಸಲಾಗಿತ್ತು. ಆದರೆ ಮಹಿಳೆಯರು ಸ್ವಯಂಪ್ರೇರಿತರಾಗಿ ಗ್ಯಾರಂಟಿ ಸಮಾವೇಶ ಧಿಕ್ಕರಿಸಿ ಧರಣಿ ಸ್ಥಳಕ್ಕೆ ಬಂದು ಬುಧವಾರ ಬೆಂಬಲ ಸೂಚಿಸಿದರು.
ಬಡದಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಇರುವ ನಾಲ್ಕು ರಸ್ತೆಗಳಲ್ಲಿ ಒಂದೂ ರಸ್ತೆ ಕೂಡ ಉತ್ತಮವಾಗಿಲ್ಲ. ಹೀಗಾಗಿ ಹೆರಿಗೆ, ತುರ್ತು ಪರಿಸ್ಥಿತಿಗಳಲ್ಲಿ ಆಸ್ಪತ್ರೆಗೆ ದಾಖಲು ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಅನೇಕ ಗರ್ಭಿಣಿಯರಿಗೆ ಅರ್ಧ ದಾರಿಯಲ್ಲೇ ಹೆರಿಗೆಗಳಾಗುತ್ತಿವೆ. ತುರ್ತು ಪರಿಸ್ಥಿತಿಗಳಲ್ಲಿ ಆಸ್ಪತ್ರೆಗೆ ದಾಖಲು ಮಾಡುವ ಮುನ್ನವೇ ಜೀವ ಹೋಗುವ ಪರಿಸ್ಥಿತಿ ಇದೆ. ಹೀಗಾಗಿ ಊರಿನ ಸಂಪರ್ಕ ರಸ್ತೆಗಳಿಗಾಗಿ ನಾಗರಿಕ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಹೋರಾಟಕ್ಕೆ ನಾವು ಬೆಂಬಲ ಸೂಚಿಸುತ್ತಿದ್ದೇವೆ. ಗ್ರಾಮದ ಸೌಲಭ್ಯಗಳಿಗಾಗಿ ನಡೆಯುವ ಹೋರಾಟಕ್ಕೆ ಮುಂದಿನ ದಿನಗಳಲ್ಲೂ ಗ್ರಾಮದ ಮಹಿಳೆಯರು ಬೆಂಬಲ ಸೂಚಿಸುತ್ತೇವೆ’ ಎಂದರು.
ಈ ಸಂದರ್ಭದಲ್ಲಿ ನಾಗರಿಕ ಹೋರಾಟ ಸಮಿತಿಯ ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.