ADVERTISEMENT

ಕಲಬುರಗಿ | ಮತಪತ್ರ ಬದಲು: ತನಿಖೆಗೆ ಆಗ್ರಹ

ಮತಗಟ್ಟೆಯಲ್ಲಿ ಬಿಜೆಪಿ ಮುಖಂಡರಿಂದ ಗೂಂಡಾಗಿರಿ: ಆರ್.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 5:04 IST
Last Updated 6 ಡಿಸೆಂಬರ್ 2025, 5:04 IST
ಆರ್.ಕೆ. ಪಾಟೀಲ
ಆರ್.ಕೆ. ಪಾಟೀಲ   

ಕಲಬುರಗಿ: ‘ಭೂಸನೂರ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮತಪತ್ರ ಬದಲು ಪ್ರಕರಣವನ್ನು ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಾನೂನು ಕ್ರಮ ಆಗಬೇಕು’ ಎಂದು ಕೆಎಂಎಫ್‌ ಅಧ್ಯಕ್ಷ ಆರ್‌.ಕೆ.ಪಾಟೀಲ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದರಾಮ ಪ್ಯಾಟೆ ಆಗ್ರಹಿಸಿದರು.

‘ನಗರದ ವಿಶ್ವರಾಧ್ಯ ದೇವಸ್ಥಾನ ಪ್ರದೇಶದಲ್ಲಿ ಡಿ.3ರಂದು ಮತದಾನ ಪ್ರಕ್ರಿಯೆ ನಡೆದಿತ್ತು. ಮಧ್ಯಾಹ್ನ 12ರ ಸುಮಾರಿಗೆ ಮತಗಟ್ಟೆ 1ರಲ್ಲಿ ‘ಜನತಾ ಬಜಾರ್‌’ ಚುನಾವಣೆಯ ಕೆಲ ಮತಪತ್ರಗಳು ಕಂಡುಬಂದವು. ಇದನ್ನು ನಮ್ಮ ರೈತ ಮಿತ್ರ ಪೆನಲ್‌ನ ಅಭ್ಯರ್ಥಿಗಳು ಚುನಾವಣಾಧಿಕಾರಿಗಳ ಗಮನಕ್ಕೆ ತಂದಿದ್ದು, ಅಧಿಕಾರಿಗಳು ಸರಿಪಡಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಬಿಜೆಪಿಯವರು ಗೂಂಡಾಗಿರಿ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ತಕ್ಷಣವೇ ಚುನಾವಣೆ ನಡೆಸಬೇಕು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಬಿಜೆಪಿ ಅಭ್ಯರ್ಥಿಗಳು, ಮುಖಂಡರಾದ ಹರ್ಷಾನಂದ ಗುತ್ತೇದಾರ, ಅಶೋಕ ಗುತ್ತೇದಾರ ಹಾಗೂ ಅವರ ಬೆಂಬಲಿಗರು ಚುನಾವಣೆ ಸ್ಥಳಕ್ಕೆ ನುಗ್ಗಿ ಅಧಿಕಾರಿಗಳನ್ನು ಥಳಿಸಿ, ಮತಪೆಟ್ಟಿಗೆಯಲ್ಲಿ ನೀರು ಸುರಿದಿದ್ದಾರೆ. ಬಿಜೆಪಿಯವರಿಗೆ ಚುನಾವಣೆ ಬೇಕಿರಲಿಲ್ಲ. ಕಾರಣ ಉಳಿದ 2, 3 ಮತ್ತು 4 ಬೂತ್‌ಗಳಲ್ಲಿಯೂ ಮತದಾನ ಮುಂದುವರಿಸಲು ಬಿಡದೆ ಧರಣಿ ಕುಳಿತು ಬಂದ್‌ ಮಾಡಿಸಿದರು. ಇದು ಪಕ್ಷಾತೀತ ಚುನಾವಣೆ ಇದ್ದರೂ ಕಾಂಗ್ರೆಸ್‌ ವಿರುದ್ಧ ಘೋಷಣೆ ಕೂಗಿದ್ದಾರೆ. ಭಯದ ವಾತಾವರಣ ನಿರ್ಮಿಸಿ ಆಳಂದ–ಕಲಬುರಗಿ ರಸ್ತೆಯನ್ನು ಬಂದ್‌ ಮಾಡಿ ಕಾನೂನು ಉಲ್ಲಂಘಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಕಾರ್ಖಾನೆಯ ಆರ್ಥಿಕ ಸ್ಥಿರತೆ: ‘ಹಿಂದೆ ಬಿ.ಆರ್‌.ಪಾಟೀಲ ಬೆಂಬಲಿತರಾಗಿದ್ದ ಕಾರ್ಖಾನೆಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ₹13 ಕೋಟಿ ಠೇವಣಿ ಇಟ್ಟಿದ್ದು, ಇದು ಕಾರ್ಖಾನೆಯ ಆರ್ಥಿಕ ಸ್ಥಿರತೆಯನ್ನು ತೋರಿಸುತ್ತದೆ. ಇದುವರೆಗೂ ಅವಿರೋಧ ಆಯ್ಕೆ ನಡೆಯುತ್ತಿತ್ತು. ಆದರೆ, ಬಿಜೆಪಿಯವರಿಗೆ ಈ ಠೇವಣಿ ಮೇಲೆ ಕಣ್ಣಿರುವ ಕಾರಣಕ್ಕೆ ಆಡಳಿತ ಮಂಡಳಿಗೆ ಚುನಾವಣೆ ನಡೆಯುವಂತೆ ಮಾಡಿದ್ದಾರೆ. ಚುನಾವಣೆಯಲ್ಲಿ ನಮಗಿರುವ ಬೆಂಬಲ ನೋಡಿ ಗೂಂಡಾಗಿರಿ ಮಾಡಿದ್ದಾರೆ’ ಎಂದು ದೂರಿದರು.

ಪ್ರಮುಖರಾದ ಶಿವಪುತ್ರಪ್ಪ ಪಾಟೀಲ, ಅಶೋಕ ಸಾವಳೇಶ್ವರ, ಗುರುಲಿಂಗಜಂಗಮ ಮಾಲಿಪಾಟೀಲ, ಬಸವರಾಜ ಉಪ್ಪಿನ, ಧರ್ಮರಾಜ ಸಾಹು, ಶ್ರೀಮಂತ ಕ.ವಗ್ದರಗಿ, ಸಿದ್ದರಾಮ ಸಾಲಿಮನಿ ಇದ್ದರು.

‘ಆರೋಪ ಸತ್ಯಕ್ಕೆ ದೂರ’

‘ಶಾಸಕ ಬಿ.ಆರ್.ಪಾಟೀಲ ಹಾಗೂ ಆರ್‌.ಕೆ.ಪಾಟೀಲ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕೆಲಸ ಮಾಡಿದ್ದಾರೆ ಎಂಬ ಬಿಜೆಪಿ ಮುಖಂಡರ ಆರೋಪ ಸತ್ಯಕ್ಕೆ ದೂರವಾಗಿದೆ. ಕೆಎಂಎಫ್‌ನ ಯಾವ ಅಧಿಕಾರಿಯೂ ಬಂದಿಲ್ಲ. ‘ಜನತಾ ಬಜಾರ್‌’ ಚುನಾವಣೆಯ ಮತಪತ್ರಗಳಿಗೂ ಕಾಂಗ್ರೆಸ್‌ ಪಕ್ಷಕ್ಕೂ ಮತ್ತು ನಮಗೂ ಯಾವುದೇ ಸಂಬಂಧವಿಲ್ಲ’ ಎಂದು ಆರ್‌.ಕೆ.ಪಾಟೀಲ ಸ್ಪಷ್ಟಪಡಿಸಿದರು. ‘ಅಧಿಕಾರಿಗಳು ಪಾರದರ್ಶಕವಾಗಿ ಮತದಾರರ ಪಟ್ಟಿ ಸಿದ್ಧಪಡಿಸಿ ಚುನಾವಣೆ ನಡೆಸುತ್ತಿದ್ದರು. ಇನ್ನು ವಿಧಾನಸಭೆ ಚುನಾವಣೆಯಲ್ಲಿ ವಿಚಾರಣಾಧೀನ ಆರೋಪಿಗಳಾಗಿ ಜಾಮೀನು ಪಡೆದು ತಿರುಗಾಡುತ್ತಿರುವ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ ಮತ್ತು ಅವರ ಪುತ್ರ ಹರ್ಷಾನಂದ ಗುತ್ತೇದಾರ ನೈತಿಕತೆಯ ಪಾಠ ಹೇಳಲು ಹೊರಟಿರುವುದು ಹಾಸ್ಯಾಸ್ಪದ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.