ADVERTISEMENT

ಅಫಜಲಪುರ | ಬಾಳೆ ಬೆಲೆ ಕುಸಿತ; ಸಂಕಷ್ಟದಲ್ಲಿ ಬೆಳೆಗಾರರು

ಶಿವಾನಂದ ಹಸರಗುಂಡಗಿ
Published 10 ಜನವರಿ 2025, 4:53 IST
Last Updated 10 ಜನವರಿ 2025, 4:53 IST
ಅಫಜಲಪುರ ಹೋಬಳಿಗಳಲ್ಲಿ ಬಾಳೆ ಬೆಳೆಗಾರರಿಂದ ಏಜೆನ್ಸಿಗಳು ಬಾಳೆಹಣ್ಣು ಖರೀದಿ ಮಾಡುತ್ತಿರುವುದು
ಅಫಜಲಪುರ ಹೋಬಳಿಗಳಲ್ಲಿ ಬಾಳೆ ಬೆಳೆಗಾರರಿಂದ ಏಜೆನ್ಸಿಗಳು ಬಾಳೆಹಣ್ಣು ಖರೀದಿ ಮಾಡುತ್ತಿರುವುದು   

ಅಫಜಲಪುರ: ಕಳೆದ ಬೇಸಿಗೆಯಲ್ಲಿ ಮತ್ತು ಮುಂಗಾರು ಹಂಗಾಮಿನಲ್ಲಿ ರೈತರು ನಾಟಿ ಮಾಡಿರುವ ಬಾಳೆ ಬೆಳೆಗೆ ಆರಂಭದಲ್ಲಿ ಬೆಲೆ ಚೆನ್ನಾಗಿತ್ತು. ಹಂತ ಹಂತವಾಗಿ ಬೆಲೆ ಕಡಿಮೆಯಾಗಿ ರೈತರು ಹಾಕಿದ ಬಂಡವಾಳ ಮರಳಿ ಬಾರದೆ ಬಾಳೆ ಬೆಳೆಯಲು ಮಾಡಿರುವ ಸಾಲ ತೀರಿಸಲಾಗದೆ ಕಷ್ಟ ಪಡುವಂತಾಗಿದೆ.

‘ತಾಲ್ಲೂಕಿನಲ್ಲಿ ಸುಮಾರು 1 ಸಾವಿರ ರೈತರು ಬಾಳೆ ಬೆಳೆಯುತ್ತಾರೆ. ಬಾಳೆ ಬೆಳೆ 12 ತಿಂಗಳು ನಂತರ ಕಟಾವಿಗೆ ಬರುತ್ತದೆ. ರೈತರು ವರ್ಷವಿಡಿ ಬಾಳೆ ಬೆಳೆಯನ್ನು ಜೋಪಾನ ಮಾಡಿ ನಿರ್ವಹಣೆ ಮಾಡುತ್ತಾರೆ. ಆದರೆ ಅವರಿಗೆ ಸರಿಯಾದ ಬೆಲೆ ದೊರೆತರೆ ಲಾಭವಾಗುತ್ತದೆ. ಪ್ರಸ್ತುತ ವರ್ಷ ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ಪ್ರತಿ ಟನ್ ಬಾಳೆಗೆ ₹1800 ರಿಂದ ₹2ಸಾವಿರದವರೆಗೆ ದರ ಇತ್ತು. ನಂತರ ಕ್ರಮೇಣ ಕಡಿಮೆಯಾಗಿ ಸದ್ಯಕ್ಕೆ ₹1 ಸಾವಿರಕ್ಕೆ ಇಳಿದಿದೆ. ಹೀಗಾಗಿ ರೈತರಿಗೆ ನಷ್ಟವಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆಯವರು ಹೇಳುತ್ತಾರೆ.

‘ಜಿಲ್ಲೆಯಲ್ಲಿ ಅಫಜಲಪುರ ತಾಲ್ಲೂಕು ಬಾಳೆ ಬೆಳೆಯುವಲ್ಲಿ ಪ್ರಥಮ ಸ್ಥಾನದಲ್ಲಿದೆ. ಪ್ರತಿ ವರ್ಷ ಮಳೆ ಪ್ರಮಾಣ ಕಡಿಮೆಯಾಗುತ್ತಿರುವರಿಂದ ತೆರೆದ ಬಾವಿಗಳ ಮತ್ತು ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕಡಿಮೆ ಆಗುತ್ತಿದೆ. ಪರಿಣಾಮ ಇತ್ತೀಚೆಗೆ ಬಾಳೆ ಬೆಳೆಯುವುದು ಕಡಿಮೆಯಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆಯವರು ಹೇಳಿದರು.

ADVERTISEMENT

ಪಟ್ಟಣದ ಬಾಳೆ ಬೆಳೆಗಾರರಾದ ಚಂದರಾಮ ಬಳಗೊಂಡೆ ಹಾಗೂ ಚಂದ್ರಶೇಖರ್ ಕರಜಿಗಿ ಮಾಹಿತಿ ನೀಡಿ, ‘ಖರ್ಚು ದುಬಾರಿಯಾಗುತ್ತಿದೆ. ದುಬಾರಿ ಕೂಲಿ ಕೊಟ್ಟರೂ ಕೂಲಿಕಾರರು ದೊರೆಯುತ್ತಿಲ್ಲ. ಎಲ್ಲರೂ ಬೇರೆ ಬೇರೆ ಕೆಲಸಗಳಿಗೆ ನೆರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಕೃಷಿ ಮುಂದುವರಿಸಿಕೊಂಡು ಹೋಗುವುದು ಕಷ್ಟವಾಗುತ್ತಿದೆ. ಅದರಲ್ಲಿ ನಮಗೆ ಯೋಗ್ಯವಾದ ಬೆಲೆ ದೊರೆಯುತ್ತಿಲ್ಲ. ಬಾಳೆಗೆ ಬಳಸುವ ಗೊಬ್ಬರಗಳು ಸಾಕಷ್ಟು ಬೆಲೆ ಗಗನಕ್ಕೇರಿವೆ. ಸರ್ಕಾರವೇ ಬೆಂಬಲ ಬೆಲೆಯಲ್ಲಿ ಬಾಳೆ ಖರೀದಿ ಮಾಡಬೇಕು. ತೋಟಗಾರಿಕೆ ಇಲಾಖೆಯವರು ಬೆಳೆಗಾರರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು’ ಎಂದು ಅವರು ತಿಳಿಸಿದರು.

ತೋಟಗಾರಿಕೆ ಇಲಾಖೆ ಮುಖಾಂತರ ಬಾಳೆ ಸಸಿಗಳನ್ನು ಉಚಿತವಾಗಿ ನೀಡಬೇಕು. ಹಾಪ್‌ಕಾಮ್ಸ್‌ನವರು ಬೆಂಬಲ ಬೆಲೆಯಲ್ಲಿ ಬಾಳೆಹಣ್ಣು ಖರೀದಿ ಮಾಡಬೇಕು ಎಂದು ಬೆಳೆಗಾರರಾದ ಬಳ್ಳೂರಗಿ ಸುಭಾಷ್ ಗುತ್ತೇದಾರ, ಹಜ್ಜು ಪಟೇಲ್ ಹಾಗೂ ಬಂಡು ಚೌಹಾಣ್ ಒತ್ತಾಯಿಸಿದರು. 

ಬಾಳೆ ಬೆಳೆಗಾರರಿಗೆ ಪ್ರೋತ್ಸಾಹ ನೀಡಲು ವಿವಿಧ ತಳಿಗಳ ಅಭಿವೃದ್ಧಿಗಾಗಿ ಸರ್ಕಾರ ಕಲ್ಯಾಣ ಕರ್ನಾಟಕದಲ್ಲಿ ಬಾಳೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಬೇಕು
ಚಂದ್ರಶೇಖರ್ ಕರಜಿಗಿ, ಪ್ರಗತಿಪರ ರೈತ ಅಫಜಲಪುರ
ರಾಜ್ಯ ಸರ್ಕಾರ ಪ್ರತಿ ವರ್ಷ ಬಜೆಟ್‌ನಲ್ಲಿ ಬಾಳೆ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡಬೇಕು ಮತ್ತು ಬೆಂಬಲ ಬೆಲೆ ಘೋಷಣೆ ಮಾಡಬೇಕು
ಅರ್ಜುನ್ ಸೋಮಜಾಳ, ಎಪಿಎಂಸಿ ಮಾಜಿ ನಿರ್ದೇಶಕ ಬಳ್ಳೂರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.