ADVERTISEMENT

ಕೃಷಿ ಸಾಲ ಮನ್ನಾಗೆ ಆಗ್ರಹಿಸಿ ಬೆಂಗಳೂರು ಚಲೊ: ಧರ್ಮರಾಜ ಬಿ.ಸಾಹು

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 13:52 IST
Last Updated 31 ಜನವರಿ 2024, 13:52 IST

ಕಲಬುರಗಿ: ‘ಮುಂಬರುವ ಬಜೆಟ್‌ನಲ್ಲಿ ಕೃಷಿ ಸಾಲ ಮನ್ನಾ ಘೋಷಣೆ, ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ ₹ 150 ಪಾವತಿ, ತೆಲಂಗಾಣ ಮಾದರಿಯಲ್ಲಿ ರೈತರಿಗೆ ₹ 5 ಲಕ್ಷ ಜೀವ ವಿಮೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆಬ್ರುವರಿ 6ರಂದು ಬೆಂಗಳೂರು ಚಲೊ ಚಳವಳಿ ಹಮ್ಮಿಕೊಳ್ಳಲಾಗಿದೆ’ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಧರ್ಮರಾಜ ಬಿ.ಸಾಹು ತಿಳಿಸಿದರು.

‘ರಾಜ್ಯ ಸರ್ಕಾರವು 2024–25ನೇ ಸಾಲಿನ ಬಜೆಟ್‌ನಲ್ಲಿ ರೈತರ ಹಿತಾಸಕ್ತಿಗೆ ಹೆಚ್ಚು ಒತ್ತು ನೀಡಬೇಕು. ತೆಲಂಗಾಣದಲ್ಲಿ ಕೃಷಿಕರ ಸಾಲ ಮನ್ನಾ ಮಾಡಿದಂತೆ ಕರ್ನಾಟಕದಲ್ಲೂ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರು ಹಾಗೂ ರೈತ ಮಹಿಳೆಯರು ಈ ಚಳವಳಿ ನಡೆಸುವರು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕಬ್ಬಿನ ಎಫ್ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ಬದಲಿಸಬೇಕು. ಕಬ್ಬು ಬೆಳೆಗಾರರಿಂದ ಸಕ್ಕರೆ ಕಾರ್ಖಾನೆಗಳು ತಮ್ಮ ಮನಬಂದಂತೆ ಸಾಗಾಣಿಕೆ ವೆಚ್ಚ ವಸೂಲಿ ಮಾಡುತ್ತಿವೆ. ಕಡಿತದ ಹಣವನ್ನು ಬೆಳೆಗಾರರಿಗೆ ವಾಪಸ್ ನೀಡಬೇಕು. 2022-23ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹150 ಹೆಚ್ಚುವರಿ ದರ ಪಾವತಿಸಬೇಕು. ಇಲ್ಲದಿದ್ದರೆ ಸರ್ಕಾರವೇ ಈ ಹಣ ಪಾವತಿಸಬೇಕು’ ಎಂದು ಕೋರಿದರು.

ADVERTISEMENT

‘ಈಗಿರುವ ಇಳುವರಿಯ ಮಾನದಂಡವನ್ನು ಬದಲಾಯಿಸಿ, ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು. ಕಬ್ಬಿನ ಎಥೆನಾಲ್ ಉತ್ಪಾದನೆಯ ಲಾಭಾಂಶವನ್ನು ಕಬ್ಬಿನ ದರದಲ್ಲಿ ಪರಿಗಣಿಸಬೇಕು. ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಕಬ್ಬು ಬೆಳೆ ಸುಟ್ಟರೆ ಕಾರ್ಖಾನೆಗಳು ಶೇ 25ರಷ್ಟು ಕಡಿತವನ್ನು ಬಿಟ್ಟು ಎಫ್‌ಆರ್‌ಪಿ ಹಣವನ್ನು ಕೊಡಬೇಕು’ ಎಂದು ಒತ್ತಾಯಿಸಿದರು.

‘60 ವರ್ಷ ತುಂಬಿದ ರೈತರಿಗೆ ಮಾಸಿಕ ₹ 10,000 ಪಿಂಚಣಿ ಯೋಜನೆ ಜಾರಿಗೆ ತರಬೇಕು. ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಯ ನಡುವಿನ ದ್ವಿಪಕ್ಷೀಯ ಒಪ್ಪಂದದ ನೀತಿಯನ್ನು ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಕಡ್ಡಾಯಗೊಳಿಸಬೇಕು ಎಂಬ ಬೇಡಿಕೆಗಳನ್ನು ಇರಿಸಿಕೊಂಡು ಚಳವಳಿ ನಡೆಸಲಾಗುತ್ತದೆ’ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ರಮೇಶ ಹೂಗಾರ, ಶರಣು ಬಿಲ್ಲಾಡ, ಬಸವರಾಜ ಪಾಟೀಲ, ನಾಗೇಂದ್ರರಾವ ದೇಶಮುಖ, ಶಾಂತವೀರಪ್ಪ ದಸ್ತಾಪುರ, ಕೇಶಪ್ಪ ಕೊರಳ್ಳಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.