ADVERTISEMENT

ಚಿಂಚೋಳಿ: ಪ್ರಕೃತಿ ಮಡಿಲಲ್ಲಿ ‘ದವಾಳಿ’ ಸಂಭ್ರಮ

ಚಿಂಚೋಳಿ: ಹಿರಿಯರ ಸ್ಮರಣೆಗೆ ಧಬಕಾರ, ಮೇರಾದಲ್ಲಿ ಕಾಣಿಕೆ ಸ್ವೀಕಾರ 

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 6:28 IST
Last Updated 24 ಅಕ್ಟೋಬರ್ 2025, 6:28 IST
ಚಿಂಚೋಳಿ ತಾಲ್ಲೂಕಿನ ಕಲಭಾವಿ ತಾಂಡಾದಲ್ಲಿ ಮದುವಣಗಿತ್ತಿಯಿಂದ ಗೋಧಣ ಪೂಜೆಗೈಯ್ದು ನೈವೇದ್ಯ ಅರ್ಪಿಸುತ್ತಿರುವುದು
ಚಿಂಚೋಳಿ ತಾಲ್ಲೂಕಿನ ಕಲಭಾವಿ ತಾಂಡಾದಲ್ಲಿ ಮದುವಣಗಿತ್ತಿಯಿಂದ ಗೋಧಣ ಪೂಜೆಗೈಯ್ದು ನೈವೇದ್ಯ ಅರ್ಪಿಸುತ್ತಿರುವುದು   

ಚಿಂಚೋಳಿ: ತಾಲ್ಲೂಕಿನ ತಾಂಡಾಗಳಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಬಂಜಾರಾ ಜನರು ಬುಧವಾರ ಆಚರಿಸಿದರು.

ಕಾಳಿಮಾಸದಿಂದ ಆರಂಭವಾದ ದವಾಳಿಯಲ್ಲಿ ಬಂಜಾರಾ ಯುವತಿಯರು ಬಣ್ಣ ಬಣ್ಣದ ಹೊಸ ಬಟ್ಟೆ ಧರಿಸಿ ಸಾಂಪ್ರದಾಯಿಕ ನೃತ್ಯ ಮಾಡಿ ಮಿಂಚಿದರು. ಬಂಜಾರಾ ಜನಾಂಗದವರು ಯಾವುದೇ ಹಬ್ಬ ಹರಿದಿನ ಆಚರಿಸಬೇಕಾದರೆ ಮೊದಲು ಅವರ ಮನೆಯಲ್ಲಿ ಹಿರಿಯರ ಸ್ಮರಣೆ ಕಡ್ಡಾಯವಾಗಿದೆ. ಇದರ ಪ್ರತೀಕವಾಗಿ ಅವರ ಇಷ್ಟದ ತಿಂಡಿ ತಿನಿಸು, ಪದಾರ್ಥ ಅರ್ಪಣೆ ಮಾಡುವ ಮೂಲಕ ಧಬುಕಾರ ಆಚರಿಸಿ ತಮ್ಮ ನಮನ ಸಲ್ಲಿಸಿದರು.

ಅಮಾವಾಸ್ಯೆ ಸಂಜೆಗೆ ಕಾಳಿಮಾಸ ಪ್ರಯುಕ್ತ ದೇವರಿಗೆ ಮೇರಾ ಅರ್ಪಿಸಿ ನಾಯಕ, ಕಾರಭಾರಿ, ಢಾಂವ್, ಸಾಣ್ ಮತ್ತು ಮನೆ ಮಂದಿಗೆ ಹಾಗೂ ತಾಂಡಾದ ಪ್ರತಿ ಮನೆಗೆ ತೆರಳಿ ದೀಪ ಬೆಳಗಿ ಮೇರಾ ಅರ್ಪಿಸಿ ಹಿರಿಯರಿಂದ ಕಾಣಿಕೆ ಸ್ವೀಕರಿಸಿ ಬಂಜಾರಾ ಬೆಡಗಿಯರು ಸಂಭ್ರಮಿಸಿದರು.

ADVERTISEMENT

ಹಬ್ಬದ ದಿನದಂದು ಯುವತಿಯರು, ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ಸೇವಾಲಾಲ ಮರಿಯಮ್ಮ ಮಂದಿರಕ್ಕೆ ತೆರಳಿ ದರ್ಶನ ಮಾಡಿ, ನಾಯಕನ ಮನೆಗೆ ತೆರಳಿ ಅಲ್ಲಿ ಸಗಣಿ ಎತ್ತುವ ಬುಟ್ಟಿ ತೆಗೆದುಕೊಂಡು ಅಡವಿಗೆ ತೆರಳಿ ಕಾಡಿನಲ್ಲಿ ಸಿಗುವ ಹೂವು ಬಿಡಿಸಿಕೊಂಡು ತಾಂಡಾಕ್ಕೆ ಮರಳಿದರು.

ತಾಂಡಾದಲ್ಲಿ ದೇವರಿಗೆ ಹೂವು ಅರ್ಪಿಸಿ ನಂತರ ನಾಯಕನ ಮನೆಗೆ ತೆರಳಿ ಅಲ್ಲಿ ಗೋಧಣಗೆ ಹೂವು ಅರ್ಪಿಸಿ ಪ್ರತಿ ಮನೆಗಳಿಗೆ ತೆರಳಿ ಹೂವು ಅರ್ಪಿಸಿದರು. ನಂತರ ಮದುವೆ ನಿಶ್ಚಿತಾರ್ಥವಾದ ಯುವತಿಯಿಂದ ದೋಧಣಗೆ ಪೂಜೆ ಸಲ್ಲಿಸಿ ಅಕ್ಕಿ ಹಿಟ್ಟು ಬೆಲ್ಲದ ನೈವೇದ್ಯ ಸಮರ್ಪಿಸಿ ನೀರು ಅರ್ಪಿಸುವ ಪರಂಪರೆ ನಡೆಸಲಾಯಿತು. ವಿಜಯದಶಮಿಯಿಂದ ಆರಂಭವಾದ ಯುವತಿಯರ ಸಾಂಪ್ರದಾಯಿಕ ನೃತ್ಯ ದವಾಳಿ ಆಚರಣೆಯಲ್ಲಿ ಅನುರಣಿಸಿತು. ಪ್ರತಿ ತಾಂಡಾದಲ್ಲಿ ಯುವತಿಯರು ಪಾರಂಪರಿಕ ನೃತ್ಯಕ್ಕೆ ಹೆಜ್ಜೆ ಹಾಕಿ ಸಾಂಸ್ಕೃತಿಕ ಗೀತೆಗಳ ಗಾಯನದ ಮೂಲಕ ಗಮನ ಸೆಳೆದರು.

ತಾಲ್ಲೂಕಿನ ಪೆದ್ದ ತಾಂಡಾ, ಧರ್ಮಾಸಾಗರ, ಎತೆಬಾರಪುರ, ರಾಮಶೆಟ್ಟಿ ನಾಯಕ, ಫತ್ತು ನಾಯಕ, ಹೇಮ್ಲಾ ನಾಯಕ, ಶಿವರಾಮ ನಾಯಕ, ಕಲಭಾವಿ, ಚನ್ನೂರು, ಸೂರು ನಾಯಕ, ರೂಪ್ಲಾನಾಯಕ, ಡೊಂಗರು ನಾಯಕ, ಭಾವಿ, ಮೋಟಿಮೋಕ್, ಚೌಕಿ ತಾಂಡಾ, ಇದ್ದಲಮೋಕ್ ತಾಂಡಾಗಳಲ್ಲಿ ದವಾಳಿಯನ್ನು ವೈಭವದಿಂದ ಆಚರಿಸಿದರು.

ಚಿಂಚೋಳಿ ತಾಲ್ಲೂಕಿನ ನಾಗಾಈದಲಾಯಿ ತಾಂಡಾದಲ್ಲಿ ಯುವತಿಯರು ಅಡವಿಗೆ ತೆರಳಿ ಹೂವು ಬಿಡಿಸಿಕೊಂಡು ಬರುತ್ತಿರುವುದು
ಗೋಪಾಲ ಜಾಧವ ಕಲಭಾವಿ 
ಪಾರಂಪರಿಕ ಆಚರಣೆಗಳನ್ನು ಆಧುನಿಕ ಕಾಲದಲ್ಲೂ ಮುಂದುವರಿಸಿಕೊಂಡು ಬಂದ ಲಂಬಾಣಿಗರು ಸಂಸ್ಕೃತಿ ಪ್ರಿಯರಾಗಿದ್ದು ಆಚರಣೆಗಳ ಮೂಲಕ ಪ್ರಕೃತಿಯ ಶಿಶುಗಳಾಗಿ ಕಾಣಿಸುತ್ತಾರೆ
ಗೋಪಾಲ ಜಾಧವ, ಕಲಭಾವಿ ತಾಂಡಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.