ಕಲಬುರಗಿ: ಪರೀಕ್ಷೆ ನಡೆದು 9 ತಿಂಗಳಾದರೂ ಈತನಕ ಫಲಿತಾಂಶ ಪ್ರಕಟಿಸಿಲ್ಲ ಎಂದು ಆರೋಪಿಸಿ ಗುಲಬರ್ಗಾ ವಿಶ್ವವಿದ್ಯಾಲಯ ಎದುರು ಬಿ.ಇಡಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
‘2024ರ ಡಿಸೆಂಬರ್‌ನಲ್ಲಿ ಬಿ.ಇಡಿ 4ನೇ ಸೆಮಿಸ್ಟರ್ ಪರೀಕ್ಷೆಗಳು ನಡೆದಿದ್ದವು. ಅದಾಗಿ 9 ತಿಂಗಳು ಕಳೆದಿವೆ. ಈತನಕ ಫಲಿತಾಂಶ ಪ್ರಕಟಿಸಿಲ್ಲ. ಇದರಿಂದ ಕೆಪಿಎಸ್‌ಸಿ ನಡೆಸುವ ವಿವಿಧ ನೇಮಕಾತಿ ಪರೀಕ್ಷೆಗಳು, ಕೇಂದ್ರ ಸರ್ಕಾರದಿಂದ ಚಾಲ್ತಿಯಲ್ಲಿರುವ ಏಕಲವ್ಯ ಮಾದರಿ ವಸತಿ ಶಾಲೆ ಪರೀಕ್ಷೆ ಹಾಜರಾಗಲು ತೊಂದರೆಯಾಗುತ್ತಿದೆ. ಅದಕ್ಕೆ ಅರ್ಜಿ ಹಾಕಲು ಅಕ್ಟೋಬರ್ 23 ಕೊನೆಯ ದಿನವಿದ್ದು, ಅಷ್ಟರೊಳಗೆ ಫಲಿತಾಂಶ ಪ್ರಕಟಿಸಬೇಕು’ ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಈ ವೇಳೆ ಮಾತನಾಡಿ ವಿದ್ಯಾರ್ಥಿ ಸಂತೋಷ ಕುಮಾರ, ‘ಗುಲಬರ್ಗಾ ವಿ.ವಿಯ ಅಧಿಕಾರಿಗಳ ತಪ್ಪಿನಿಂದ ಬಿ.ಇಡಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಣೆ ವಿಳಂಬವಾಗಿದೆ. ಅಧಿಕಾರಿಗಳ ಭ್ರಷ್ಟಾಚಾರದ ಫಲವನ್ನು ವಿದ್ಯಾರ್ಥಿಗಳು ಅನುಭವಿಸುವಂತಾಗಿದೆ. ಹೈಕೋರ್ಟ್ ಕೂಡ ಎರಡು ವಾರಗಳಲ್ಲಿ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿದೆ. ಅದಕ್ಕೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ದೂರಿದರು.
‘ಫಲಿತಾಂಶದ ಬಗ್ಗೆ ವಿಚಾರಿಸಿದರೆ, ಸಿಂಡಿಕೇಟ್ ಸಭೆ ನಡೆಯಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕುರಿತು ಸಿಂಡಿಕೇಟ್ ಸದಸ್ಯರೊಂದಿಗೆ ಮಾತನಾಡಿದ್ದು, ಶೀಘ್ರವೇ ವಿಶೇಷ ಸಿಂಡಿಕೇಟ್ ಸಭೆ ಕರೆದು ಚರ್ಚಿಸಿ ಇನ್ನೊಂದು ವಾರದಲ್ಲಿ ಫಲಿತಾಂಶ ಪ್ರಕಟಿಸಬೇಕು. ಇಲ್ಲದಿದ್ದರೆ ಮತ್ತೆ ವಿಶ್ವವಿದ್ಯಾಲಯದ ವಿರುದ್ಧ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ಬಳಿಕ ಈ ಸಂಬಂಧ ಮನವಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಜಿ.ಕಣ್ಣೂರ ಅವರಿಗೆ ಸಲ್ಲಿಸಿದರು.
‘ಬಿ.ಇಡಿ ವಿದ್ಯಾರ್ಥಿಗಳ ಫಲಿತಾಂಶದ ಕುರಿತು ಕುಲಪತಿ ಅವರೊಂದಿಗೆ ಚರ್ಚಿಸಲಾಗುವುದು. ಜೊತೆಗೆ ಒಂದು ವಿಶೇಷ ಸಿಂಡಿಕೇಟ್ ಸಭೆ ಕರೆದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಂದು ನಿರ್ಧಾರ ಕೈಗೊಂಡು ಫಲಿತಾಂಶ ಪ್ರಕಟಿಸಲು ಕ್ರಮವಹಿಸಲಾಗುವುದು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಎನ್.ಜಿ. ಕಣ್ಣೂರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.