ADVERTISEMENT

‘ಬೇಡ ಜಂಗಮರ ಹೆಸರಿನಲ್ಲಿ ಸುಳ್ಳು ಪ್ರಮಾಣತ್ರ’

ನಕಲಿ ಬೇಡ ಜಂಗಮರ ವಿರೋಧಿ ವೇದಿಕೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 4:27 IST
Last Updated 9 ಆಗಸ್ಟ್ 2022, 4:27 IST
ಕಲಬುರಗಿಯಲ್ಲಿ ನಕಲಿ ಬೇಡ ಜಂಗಮರ ವಿರೋಧಿ ವೇದಿಕೆಯ ಸದಸ್ಯರು ಪ್ರತಿಭಟನೆ ನಡೆಸಿದರು
ಕಲಬುರಗಿಯಲ್ಲಿ ನಕಲಿ ಬೇಡ ಜಂಗಮರ ವಿರೋಧಿ ವೇದಿಕೆಯ ಸದಸ್ಯರು ಪ್ರತಿಭಟನೆ ನಡೆಸಿದರು   

ಕಲಬುರಗಿ: ಬೇಡ ಜಂಗಮ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರನ್ನು ಮತ್ತು ಜಾತಿ ಪ್ರಮಾಣಪತ್ರ ನೀಡಿದ ಅಧಿಕಾರಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ನಕಲಿ ಬೇಡ ಜಂಗಮರ ವಿರೋಧಿ ವೇದಿಕೆ ಸದಸ್ಯರು ನಗರದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

‘ವೀರಶೈವ ಲಿಂಗಾಯತ ಸಮುದಾಯದವರು ಸತ್ಯದ ಪ್ರತಿಪಾದನೆ ಎಂದು ಬಿಂಬಿಸಿಕೊಂಡು ತಾವು ಬೇಡ ಜಂಗಮ ಎಂಬ ಮಹಾಸುಳ್ಳನ್ನು ನಂಬಿಸಲು ಹೊರಬಿದ್ದಿದ್ದಾರೆ. ಆ ಮೂಲಕ ತಮ್ಮ ಅಪರಾಧಿ ಕೃತ್ಯವನ್ನೇ ಕಾನೂನುಬದ್ಧಗೊಳಿಸಲು ರಾಜಾರೋಷವಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕಳೆದ ಜೂನ್ 30ರಂದು ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಅಡಿಯಲ್ಲಿ ಸತ್ಯ ಪ್ರತಿಪಾದನಾ ಸತ್ಯಾಗ್ರಹ ಎಂಬ ಹೆಸರಿನಲ್ಲಿ ನಡೆದ ಪ್ರತಿಭಟನೆಯೇ ಇದಕ್ಕೊಂದು ನಿದರ್ಶನ’ ಎಂದು ಪ್ರತಿಭಟನಾಕಾರರು ಟೀಕಿಸಿದರು.

‘ಮಾನವ ಶಾಸ್ತ್ರ ಸರ್ವೇಕ್ಷಣ ಸಂಸ್ಥೆ ಅಧಿಕೃತವಾಗಿ ಕೆ.ಎಸ್‌. ಸಿಂಗ್ ನೇತೃತ್ವದಲ್ಲಿ 1985ರಿಂದ 1990ರವರೆಗೆ ಅಧ್ಯಯನ ನಡೆಸಿದೆ. ಬೇಡ ಜಂಗಮರು ಆಂಧ್ರ ಮೂಲದಿಂದ ಬಂದವರು. ಇವರ ಭಾಷೆ ತೆಲುಗು. ಹೊಲೆಯ–ಮಾದಿಗ ಜಾತಿಯ ಜನರಿಗೆ ಮಾತ್ರ ಗುರುಗಳು. ಇವರು ಪಕ್ಕಾ ಮಾಂಸಾಹಾರಿಗಳು, ಹಂದಿಯನ್ನು ಸಹ ತಿನ್ನುತ್ತಾರೆ. ಚಾ‍ಪೆ ಹೆಣೆಯುವವರು, ದನಕರು, ಹಂದಿ ಸಾಕುವುದು,ಬಲ ಹೇಳುವುದು ಮತ್ತು ಊರೂರುಗಳಲ್ಲಿ ಭಿಕ್ಷೆ ಬೇಡುವುದು ಇವರ ಕುಲಕಸುಬು. ಇವರ ಸಾಮಾಜಿಕ ಸ್ಥಾನಮಾನ ಅತ್ಯಂತ ಕೆಳಸ್ತರಲ್ಲಿದೆ’ಎಂದುಪ್ರತಿಭಟನಾಕಾರರುತಿಳಿಸಿದರು.

ADVERTISEMENT

‘ಈ ಕುಲಶಾಸ್ತ್ರೀಯ ಅಧ್ಯಯನದ ಅಂಶಗಳನ್ನು ನೋಡಿದಾಗ ವೀರಶೈವ ಲಿಂಗಾಯತ ಜಂಗಮರು ಮತ್ತು ಬೇಡ ಜಂಗಮರು ಬೇರೆ ಬೇರೆ ಎಂಬುದು ಗೋಚರಿಸುತ್ತದೆ. ಹೀಗಿದ್ದರೂ 1976ರಲ್ಲಿ ಬೇಡ ಜಂಗಮ, ಬುಡ್ಗ ಜಂಗಮ ಜಾತಿಯನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಿದಾಗಿನಿಂದ ಪರಿಶಿಷ್ಟ ಬೇಡ ಜಂಗಮರಿಗೆ ಸಾಂವಿಧಾನಿಕವಾಗಿ ದಕ್ಕಬೇಕಾಗಿದ್ದ ಮೀಸಲಾತಿಯನ್ನು ತಪ್ಪಿಸಿ, ರಾಜ್ಯದ ಪ್ರಬಲ ವೀರಶೈವ ಲಿಂಗಾಯತ ಸಮುದಾಯದ ಜಂಗಮರು ಬೇಡ ಜಂಗಮ, ಬುಡ್ಗ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಕಬಳಿಸುತ್ತಿದ್ದಾರೆ’ ಎಂದು ಅವರು ಹರಿಹಾಯ್ದರು.

‘ಸುಳ್ಳು ಜಾತಿ ಪ್ರಮಾಣತ್ರದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಲು ಪ್ರತಿ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ನ್ಯಾಯಾಲಯದ ಮುಂದೆ ಸರ್ಕಾರದ ಪರ ವಾದಿಸಲು ತರಬೇತಿಗೊಳಿಸಿದ ವಿಶೇಷ ವಕೀಲರನ್ನು ಪ್ರತಿ ಜಿಲ್ಲೆಯಲ್ಲಿ ನೇಮಿಸಬೇಕು. ಶಾಲಾ ದಾಖಲಾತಿಯಲ್ಲಿ 1ನೇ ತರಗತಿಯಲ್ಲಿ ಬೇಡ ಜಂಗಮ, ಬುಡ್ಗ ಜಂಗಮ, ಲಿಂಗಾಯತ ಜಂಗಮ ಎಂದು ದಾಖಲಿಸಲು ಪ್ರಾರಂಭಿಸಿರುವುದರಿಂದ ಜಾತಿ ಸುಳ್ಳು ಎಂದು ತಿಳಿದು ಬಂದಲ್ಲಿ ವಂಶವೃಕ್ಷವನ್ನು ತೆಗೆದುಕೊಂಡು ಪರಿಶೀಲಿಸಿ ಜಾತಿ ಪ್ರಮಾಣಪತ್ರವನ್ನು ಅಂಗೀಕರಿಸಬೇಕು ಮತ್ತು ಜಾರಿ ನಿರ್ದೇಶನಾಲಯದ ಜಾಗೃತ ಕೋಶದಿಂದ ವರದಿ ತರಿಸಿಕೊಳ್ಳಬೇಕು’ ಎಂದು ಅವರು ತಿಳಿಸಿದರು.

ಸಂಗಾನಂದ ಭಂತೇಜಿ, ನಕಲಿ ಬೇಡ ಜಂಗಮರ ವಿರೋಧಿ ವೇದಿಕೆಯ ಸಂಚಾಲಕ ಮಂಡಳಿ ಸದಸ್ಯರಾದ ಅರ್ಜುನ ಭದ್ರೆ, ಸುಧಾಮ ಧನ್ನಿ, ಮರಿಯಪ್ಪ ಹಳ್ಳಿ, ಸಂತೋಷ ಮೇಲಿನಮನಿ, ಹಣಮಂತ ಬೋಧನಕರ್, ಮಲ್ಲ‍‌ಪ ಹೊಸಮನಿ, ದೇವಿಂದ್ರ ಸಿನ್ನೂರ, ಸೂರ್ಯಕಾಂತ ಆಜಾದಪುರ, ಭೀಮಶಾ ಖನ್ನಾ, ಕಾಶಿರಾಯ ಎಸ್. ನಂದೂರಕರ್, ಸಿದ್ದಣ್ಣ ಭಾವಿಮನಿ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ಮೀನಾಕ್ಷಿ ಬಾಳಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.