ಕಲಬುರಗಿ: ಸಾಧನೆಗೆ ಬಡತನ ಅಡ್ಡಿಯಾಗಲಾರದು ಎನ್ನುವುದನ್ನು ಅಫಜಲಪುರದ ವಿದ್ಯಾರ್ಥಿನಿ ಭಾಗ್ಯಶ್ರೀ ಕುಮಸಗಿ ನಿರೂಪಿಸಿದ್ದಾಳೆ. ದ್ವಿತೀಯ ಪಿಯುಸಿಯಲ್ಲಿ ಶೇ 94ರಷ್ಟು ಫಲಿತಾಂಶ ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ಅಫಜಲಪುರ ತಾಲ್ಲೂಕಿಗೆ ಮೊದಲನೆಯವಳಾಗಿ ಹೊರಹೊಮ್ಮಿದ್ದಾಳೆ.
ಅಫಜಲಪುರದ ಅಂಬಿಗರ ಚೌಡಯ್ಯ ನಗರದಲ್ಲಿ ನೆಲೆಸಿರುವ ಜಗದೀಶ ಕುಮಸಗಿ ಮತ್ತು ಶ್ರೀದೇವಿ ದಂಪತಿಗೆ ಮೂವರು ಹೆಣ್ಣುಮಕ್ಕಳು, ಒಬ್ಬ ಪುತ್ರನಿದ್ದು, ಅದರಲ್ಲಿ ಭಾಗ್ಯಶ್ರೀಯೇ ಮೊದಲನೆಯವಳು. ಅಂಗೈಯಷ್ಟೂ ಜಮೀನು ಹೊಂದಿರದ ಈ ಕುಟುಂಬ ಕೂಲಿ ಮಾಡಿಯೇ ಜೀವನ ಸಾಗಿಸುತ್ತಿದೆ. ದಂಪತಿಗಳಿಬ್ಬರೂ ರೈತಕೂಲಿ ಕಾರ್ಮಿಕರಾಗಿದ್ದು, ವಾರದಲ್ಲಿ ನಾಲ್ಕೈದು ದಿನ ಕೆಲಸ ಸಿಕ್ಕರೆ ಹೆಚ್ಚು. ಕೂಲಿಯೂ ಅಷ್ಟಕ್ಕಷ್ಟೇ.. ಜಗದೀಶಗೆ ದಿನಕ್ಕೆ ₹ 500 ಸಿಕ್ಕರೆ ಶ್ರೀದೇವಿಗೆ ₹ 300 ಸಿಗುತ್ತದೆ. ಬಡತನವಿದೆ ಎಂದು ಜಗ್ಗದ ದಂಪತಿ ನಾಲ್ವರು ಮಕ್ಕಳಿಗೂ ಶಿಕ್ಷಣ ಕೊಡಿಸುತ್ತಿದ್ದಾರೆ.
ಈ ಬಡತನದ ಕುಟುಂಬಕ್ಕೀಗ ‘ಭಾಗ್ಯಶ್ರೀ’ ಭಾಗ್ಯದ ಬೆಳಕಾಗಿ ಹೊರಹೊಮ್ಮಿದ್ದಾಳೆ. ಎಸ್‌ಎಸ್‌ಎಲ್‌ಸಿಯಲ್ಲೂ ಭಾಗ್ಯಶ್ರೀ ಶೇ 91.04 ಅಂಕ ಪಡೆದಿದ್ದಳು. ತಾಲ್ಲೂಕಿನ ಹವಳಗಾದ ರೇಣುಕಾ ಡೆವಲಪ್‌ಮೆಂಟ್ ಇಂಡಿಪೆಂಡೆಂಟ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿರುವ ಭಾಗ್ಯಶ್ರೀ ಕಾಲೇಜಿನ ಜತೆಗೆ ತಾಲ್ಲೂಕಿನ ಟಾಪರ್ ಆಗಿದ್ದಾಳೆ. ಭಾಗ್ಯಶ್ರೀ ಏಪ್ರೀಲ್ 16 ಮತ್ತು 17ರಂದು ನಡೆಯಲಿರುವ ಸಿಇಟಿ, ಮೇ 4ರಂದು ನಡೆಯಲಿರುವ ನೀಟ್ ಪರೀಕ್ಷೆಯತ್ತ ಗಮನ ನೆಟ್ಟಿದ್ದಾಳೆ. ಆದರೆ ಮುಂದಿನ ವಿದ್ಯಾಭ್ಯಾಸಕ್ಕೆ ಸರ್ಕಾರಿ ಸೀಟು ಸಿಗಲಿಲ್ಲವೆಂದರೆ ಕನಸುಗಳು ಕಮರುತ್ತವೆ ಎಂದು ಭಾವುಕಳಾಗುತ್ತಾಳೆ. ವಿದ್ಯಾರ್ಥಿನಿ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವಿನ ಅಗತ್ಯವಿದ್ದು, ದಾನಿಗಳ ನಿರೀಕ್ಷೆಯಲ್ಲಿದ್ದಾಳೆ. ಸಂಪರ್ಕಕ್ಕೆ ಮೊ.82176–09405.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.