ADVERTISEMENT

ಸೆ.25 ರಂದು ಭಾರತ್ ಬಂದ್‌

ರೈತ, ಕಾರ್ಮಿಕ ತಿದ್ದುಪಡಿ ಕಾಯ್ದೆಗೆ ರೈತ ಸಂಘಟನೆಗಳ ವಿರೋಧ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 10:49 IST
Last Updated 5 ಸೆಪ್ಟೆಂಬರ್ 2021, 10:49 IST

ಕಲಬುರ್ಗಿ: ‘ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಸೆಪ್ಟೆಂಬರ್‌ 25ರಂದುಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯು ಭಾರತ್ ಬಂದ್‌ಗೆ ಕರೆ ನೀಡಿದೆ. ರಾಜ್ಯದಲ್ಲಿ ಈ ಬಂದ್ ಯಶಸ್ವಿಗೊಳಿಸಲು ಸಂಯುಕ್ತ ಹೋರಾಟ ಸಮಿತಿ ನಿರ್ಧರಿಸಿದೆ’ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರದ್ದು‌ಪಡಿಸಬೇಕು ಎಂದು ರೈತರು 9 ತಿಂಗಳುಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಇದರ ನಡುವೆ ಸರ್ಕಾರ ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡಲು ಹುನ್ನಾರ ನಡೆಸಿದೆ’ ಎಂದರು.

‘ಕೃಷಿ ತಿದ್ದುಪಡಿ ಮಸೂದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಲು ರಾಜ್ಯದಲ್ಲಿ 42 ಸಂಘಟನೆಗಳನ್ನೊಳಗೊಂಡ ಸಂಯುಕ್ತ ಹೋರಾಟ ಸಮಿತಿ ರಚಿಸಲಾಗಿದೆ. ಸೆ.6 ರಂದು ಎಲ್ಲ ಸಂಘಟನೆಗಳ
ಪ್ರಮುಖರು ಸಭೆ ಸೇರಿ, ಹೋರಾಟದ ರೂಪರೇಷೆಗಳನ್ನು ಸಿದ್ಧಪಡಿಸುತ್ತೇವೆ’ ಎಂದರು.

ADVERTISEMENT

ಅಕ್ಟೋಬರ್‌ 2ರಿಂದ ಸ್ವರಾಜ್ ಯಾತ್ರೆ: ‘ಕೇಂದ್ರ ಸರ್ಕಾರ ಹಠಮಾರಿತನ ತೋರಿದಷ್ಟು ರೈತರು ಮತ್ತಷ್ಟು ಗಟ್ಟಿಗೊಳ್ಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ರೈತ ಹೋರಾಟ ತೀವ್ರಗೊಳಿಸಲು ಅ.2 ರಿಂದ ಕಿಸಾನ್ ಸ್ವರಾಜ್ ಯಾತ್ರೆ ನಡೆಸಲು ಉದ್ದೇಶಿಸಲಾಗಿದೆ’ ಎಂದು ಚಾಮರಸ ಮಾಲಿಪಾಟೀಲ ತಿಳಿಸಿದರು.

ಕನ್ಯಾಕುಮಾರಿಯಿಂದ ದೆಹಲಿ ಯವರೆಗೆ ಈ ಯಾತ್ರೆ ನಡೆಯಲಿದೆ. ಡಿಸೆಂಬರ್ ತಿಂಗಳಲ್ಲಿ ಹೊಸಪೇಟೆಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುತ್ತಿದ್ದು, ಹೋರಾಟಗಾರರಾದ ರಾಕೇಶ್ ಸಿಂಗ್ ಟಿಕಾಯಿತ್, ಯೋಗೇಂದ್ರ ಯಾದವ್ ಸೇರಿ ಹಲವರು ಭಾಗಿಯಾಗಲಿದ್ದಾರೆ ಎಂದರು.

ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೃಷಿ ತಿದ್ದುಪಡಿ ಕಾಯ್ದೆಗಳು ಭಾರತದ ರೈತರಿಗೆ ಮಾತ್ರವಲ್ಲ, ದೇಶದ ಎಲ್ಲ ಜನರ ಮೇಲೂ ದುಷ್ಪರಿಣಾಮ ಬೀರಲಿವೆ. ಇವು ಜೀವ ವಿರೋಧಿ, ದೇಶ ವಿರೋಧಿ ಕಾಯ್ದೆಗಳಾಗಿವೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ರವಿಕುಮಾರ ಪೂಣಚ್ಚ, ಸ್ಥಾನಿಕ ಕಾರ್ಯದರ್ಶಿ ಪಿ.ಗೋಪಾಲ, ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಪಾಟೀಲ, ಮುಖಂಡ ನಾಗೇಂದ್ರ ಥಂಬೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.