ADVERTISEMENT

ಭಾವತರಂಗಿಣಿ ಭಕ್ತ ಸಮಾಗಮ 29ರಿಂದ

ರಾಮಕೃಷ್ಣ ವಿವೇಕಾನಂದ ಆಶ್ರಮದಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 12:30 IST
Last Updated 25 ಫೆಬ್ರುವರಿ 2020, 12:30 IST

ಕಲಬುರ್ಗಿ: ಇಲ್ಲಿನ ರಾಜಾಪುರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದ ಆವರಣದಲ್ಲಿ ಫೆ 29 ಹಾಗೂ ಮಾರ್ಚ್‌ 1ರಂದು ಭಾವತರಂಗಿಣಿ ಭಕ್ತ ಸಮಾಗಮ ಆಯೋಜಿಸಲಾಗಿದೆ ಎಂದು ನಿವೃತ್ತ ಪ್ರಾಚಾರ್ಯ ನರೇಂದ್ರ ಬಡಶೇಷಿ ತಿಳಿಸಿದರು.

ಆಶ್ರಮದ ಅವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೂರು ದಿನಗಳ ಕಾಲ ವಿವಿಧ ತಜ್ಞರಿಂದ ಉಪನ್ಯಾಸ ನಡೆಯಲಿದೆ. ವಿವಿಧ ನಗರಗಳಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ’ ಎಂದರು.

ಫೆ 29ರಂದು ಬೆಳಿಗ್ಗೆ 9ಕ್ಕೆ ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದ ಅವರು ಭಕ್ತ ಸಮಾಗಮವನ್ನು ಉದ್ಘಾಟಿಸುವರು. ಸಾನ್ನಿಧ್ಯವನ್ನು ಸ್ವಾಮಿ ತತ್ವರೂಪಾನಂದ ವಹಿಸುವರು. ಗದಗ–ವಿಜಯಪುರದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ರಾಮೋಹಳ್ಳಿ ರಾಮಕೃಷ್ಣ ಯೋಗಾಶ್ರಮದ ಸ್ವಾಮಿ ಯೋಗೇಶ್ವರಾನಂದ, ಬೀದರ್‌ನ ಶಾರದೇಶಾನಂದ ಸ್ವಾಮೀಜಿ ಅವರು ಭಾಗವಹಿಸಲಿದ್ದು, ವಿಟಿಯು ಪ್ರಾದೇಶಿಕ ನಿರ್ದೇಶಕ ಬಸವರಾಜ ಗಾದಗೆ ಉಪಸ್ಥಿತರಿರುವರು. ಪ್ರಾಸ್ತಾವಿಕವಾಗಿ ಸ್ವಾಮಿ ಮಹೇಶ್ವರಾನಂದ ಅವರು ಮಾತನಾಡುವರು.

ADVERTISEMENT

ಬೆಳಿಗ್ಗೆ 11.45ಕ್ಕೆ ನಿತ್ಯ ಜೀವನದಲ್ಲಿ ರಾಮಕೃಷ್ಣರ ಉಪದೇಶಗಳು ಕುರಿತು ಸ್ವಾಮಿ ಜಿತಕಾಮಾನಂದ, ರಾಮಕೃಷ್ಣರು ಕಲಿಸಿದ ಉಪನಿಷತ್ತಿನ ತತ್ವಗಳು ಕುರಿತು ಶಿವಮೊಗ್ಗದ ಶಿಕಾರಿಪುರ ಕೃಷ್ಣಮೂರ್ತಿ, ಅಧ್ಯಾತ್ಮದ ಪ್ರಖರ ಶಕ್ತಿ ಹಾಗೂ ನವದೃಷ್ಟಿಯಾಗಿ ರಾಮಕೃಷ್ಣರು ಕುರಿತು ಪತ್ರಕರ್ತ ರವೀಂದ್ರ ದೇಶಮುಖ, ಮಾತಾ ಮಹೋತ್ಸವ ಕುರಿತು ಹಾರಿಕಾ ಮಂಜುನಾಥ ಮಾತನಾಡುವರು. ಮಧ್ಯಾಹ್ನ 2.30ಕ್ಕೆ ನಡೆಯುವ ಗೋಷ್ಠಿಯಲ್ಲಿ ಸಾಧನಾ ಪಥಕ್ಕೆ ಶ್ರೀಮಾತೆಯವರ ಜೀವನದ ಬೆಳಕು ಕುರಿತು ಭವತಾರಿಣಿ ಆಶ್ರಮದ ವಿವೇಕಮಯಿ ಮಾತಾಜಿ, ಶ್ರೀಮಾತೆಯವರ ವೈಭವದ ಸರಳತೆ ಕುರಿತು ಪ್ರಭೋಧಮಯಿ ಮಾತಾಜಿ, ಮಹಾಯೋಗಿನಿ ಶ್ರೀಮಾತೆ ಕುರಿತು ಚೈತನ್ಯಮಯಿ ಮಾತಾಜಿ ಅವರಿಂದ ಉಪನ್ಯಾಸ ನಡೆಯಲಿದೆ. ಸಂಜೆ 4.30ಕ್ಕೆ ಮೌಲ್ಯ ಶಿಕ್ಷಣ ಮತ್ತು ಸ್ವಾಮಿ ವಿವೇಕಾನಂದ ಕುರಿತು ನಿತ್ಯಾನಂದ ವಿವೇಕವಂಶಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಇತರ ಗಣ್ಯರು ಮಾತನಾಡುವರು. ಸಂಜೆ 6.30ಕ್ಕೆ ಡಾ.ಶುಭಾಂಗಿ ಅವರ ಓಂಕಾರ ಸಾಧನಾ ಬಳಗದಿಂದ ನೃತ್ಯ ಪ್ರದರ್ಶನ ನಡೆಯಲಿದೆ.

ಮಾರ್ಚ್‌ 1ರಂದು ವಿವಿಧ ಗೋಷ್ಠಿಗಳ ಬಳಿಕ ಮಧ್ಯಾಹ್ನ 2.30ರಿಂದ ಗಂಗಾವತಿ ಪ್ರಾಣೇಶ ಅವರಿಂದ ಬದುಕಿನಲ್ಲಿ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ 4.30ಕ್ಕೆ ಶಶಿಕಲಾ ಕುಲಹಳ್ಳಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯುವುದು. ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಮಹೇಶ್ವರಾನಂದ ಸ್ವಾಮೀಜಿ ಮಾತನಾಡಿ, ಕಾರ್ಯಕ್ರಮದಲ್ಲಿ ಬೀದರ್‌, ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ ಜಿಲ್ಲೆಯಿಂದ ಸುಮಾರು 200ಕ್ಕೂ ಅಧಿಕ ಭಕ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.